ಭಟ್ಕಳದ ಪಾತಿಮಾ ಸಿದ್ಧಿಕಾ ಹಾಗೂ ಅವರ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಬರಹ ಹರಿದಾಡುತ್ತಿದ್ದು, ಕುಮಟಾದ ಮೆಹರಾನ್ ಶಾಬಂದ್ರೀ ಈ ಪೋಸ್ಟ್ ಮಾಡಿದ ಅನುಮಾನವ್ಯಕ್ತವಾಗಿದೆ.
ಭಟ್ಕಳದ ಸಂಶುದ್ಧಿನ್ ರಸ್ತೆಯ ನವಾಯಿತ್ ಕಾಲೋನಿಯಲ್ಲಿ ಪಾತಿಮಾ ಇನಾಸ್ ಸಿದ್ದಿಕಾ ಅವರು ವಾಸವಾಗಿದ್ದಾರೆ. ಈಚೆಗೆ ಅವರ ತಮ್ಮನ ಮದುವೆ ಆಗಿದ್ದು, ಆ ಮದುವೆಗೆ ಕುಮಟಾದ ಮೆಹರಾನ್ ಮೆಹತಾಬ್ ಶಾಬಂದ್ರೀ ಅವರು ಬಂದಿದ್ದರು. ಅದಾದ ನಂತರ ಮೆಹರಾನ್ ಶಾಬಂದ್ರೀ ಅವರು ಪಾತಿಮಾ ಸಿದ್ಧಿಕಾ ಅವರನ್ನು ಇನಸ್ಟಾಗ್ರಾಮಿನ ಮೂಲಕ ಪರಿಚಯಿಸಿಕೊಂಡು ಮೆಸೆಜ್ ಮಾಡಲು ಶುರು ಮಾಡಿದ್ದರು. ಆ ವೇಳೆ ಪಾತಿಮಾ ಸಿದ್ಧಿಕಾ ಅವರು ತಮ್ಮ ಹಾಗೂ ತಮ್ಮ ಕುಟುಂಬದ ಫೋಟೋಗಳನ್ನು ಮೆಸೆಜ್ ಮಾಡುವ ವ್ಯಕ್ತಿಯ ಜೊತೆ ಹಂಚಿಕೊAಡಿದ್ದರು.
ಅದಾದ ನಂತರ ಮೆಸೆಜ್ ಮಾಡುವವರ ಕಾಟ ಜಾಸ್ತಿ ಆಗಿದ್ದರಿಂದ ಪಾತಿಮಾ ಸಿದ್ಧಿಕಾ ಅವರು ಇನಸ್ಟಾಗ್ರಾಮಿನಿಂದ ಹೊರಬಂದರು. ಆದರೆ, ಅವರಿಗೆ ಕಾಟ ಕೊಡುವವರ ಸಂಖ್ಯೆ ಕಡಿಮೆ ಆಗಲಿಲ್ಲ. ಈ ವೇಳೆ ಪಾತಿಮಾ ಸಿದ್ಧಿಕಾ ಅವರಿಗೆ ಬೆದರಿಕೆ ಕರೆಯೊಂದು ಬಂದಿತು. ಫೋನ್ ಮಾಡಿದವರು ರಾಜಕೀಯ ಪ್ರಭಾವಿಗಳ ಹೆಸರು ಹೇಳಿ ಕೊಲೆ ಮಾಡುವುದಾಗಿಯೂ ಹೆದರಿಸಿದ್ದರು.
ಪಾತಿಮಾ ಸಿದ್ಧಿಕಾ ಅವರು ಇನಸ್ಟಾಗ್ರಾಂ ಖಾತೆ ಡಿ ಆಕ್ಟೀವ್ ಮಾಡಿದ ನಂತರ ಅವರ ಕುಟುಂಬದ ಬಗ್ಗೆ ಇಲ್ಲಸಲ್ಲದ ಆರೋಪಗಳು ವ್ಯಕ್ತವಾದವು. ಪಾತಿಮಾ ಸಿದ್ಧಿಕಾ ಅವರ ತಮ್ಮ ಶಿಬಾನಾ ಸಿದ್ದಾಕಾ ಆ ಅಶ್ಲೀಲ ಬರಹಗಳನ್ನು ನೋಡಿ ಕುಟುಂಬದವರಿಗೆ ತಿಳಿಸಿದರು. ಆಜಾದ್ ನಗರದಲ್ಲಿ ವಾಸವಾಗಿರುವ ಪಾತಿಮಾ ಸಿದ್ಧಿಕಾ ಅತ್ತಿಗೆ ಬಿಬಿ ನಫಿಸಾ ಶಿಬಾಸ್ ಸಿದ್ದಿಕಾ ಹಾಗೂ ಭಟ್ಕಳದಲ್ಲಿ ವಾಸವಾಗಿರುವ ಆಯಿಷಾ ಅನ್ನಾಸ್ ಅನ್ಸಾರ್ ಅವರಿಗೆ ಸಹ ಬೆದರಿಕೆ ಕರೆ ಬಂದಿತು. ಜಾಲತಾಣಗಳ ಮೂಲಕ ಅವರ ವಿರುದ್ಧವೂ ಅಶ್ಲೀಲ ಮೆಸೆಜ್ ಹರಿದಾಡುತ್ತಿತ್ತು.
ತಮ್ಮನ ಮದುವೆಗೆ ಬಂದಿದ್ದ ಕುಮಟಾದ ಮೆಹರಾನ್ ಶಾಬಂದ್ರೀಯೇ ಈ ಕಿಡಿಗೇಡಿ ಕೆಲಸ ಮಾಡಿದ ಬಗ್ಗೆ ಪಾತಿಮಾ ಸಿದ್ಧಿಕಾ ಅವರಿಗೆ ಅನುಮಾನವ್ಯಕ್ತವಾಯಿತು. ಹೀಗಾಗಿ ಬೆದರಿಕೆ ಬಂದಿದ್ದ ಫೋನ್ ನಂ ಜೊತೆ ತಮಗಾದ ನೋವಿನ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದು, ಭಟ್ಕಳ ಶಹರ ಪೊಲೀಸರು ಪ್ರಕರಣದ ತನಿಖೆ ಶುರು ಮಾಡಿದ್ದಾರೆ.