`ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿಯೂ ಅನುತ್ತೀರ್ಣ ಆಗುವ ಹಾಗಿಲ್ಲ. ಆ ನಿಟ್ಟಿನಲ್ಲಿ ಶಿಕ್ಷಣ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸೂಚಿಸಿದ್ದಾರೆ.
`ಅರ್ಧ ವಾರ್ಷಿಕ ಪರೀಕ್ಷೆ ಮತ್ತು ಮೊದಲ ಪ್ರಿಪರೇಟರಿ ಫಲಿತಾಂಶವನ್ನು ವಿಶ್ಲೇಷಣೆ ಮಾಡಬೇಕು. ಆ ಮೂಲಕ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವರ ಬಗ್ಗೆ ವೈಯಕ್ತಿಕವಾಗಿ ಗಮನಹರಿಸಿ ಅವರು ಉತ್ತೀರ್ಣರಾಗುವಂತೆ ಮಾಡಬೇಕು’ ಎಂದು ಅವರು ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ. `ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾದ ಮಕ್ಕಳು ತಮ್ಮ ಮುಂದಿನ ಭವಿಷ್ಯವನ್ನು ಸರಿಯಾಗಿ ರೂಪಿಸಿಕೊಳ್ಳುತ್ತಾರೆ. ಹೀಗಾಗಿ ಶಿಕ್ಷಕರು ತಮ್ಮ ಎಲ್ಲಾ ಅನುಭವಗಳನ್ನು ಧಾರೆಯೆರೆದು ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊAದಿಗೆ ಉತ್ತೀರ್ಣರಾಗುವ ಹಾಗೇ ಮಾಡಬೇಕು’ ಎಂದು ಹೇಳಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ವೃದ್ಧಿಗೆ ಕೈಗೊಂಡಿರುವ ಕ್ರಮದ ಕುರಿತು ಶಾಲಾ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಣಾಧಿಕಾರಿಗಳ ಸಭೆ ನಡೆಸಿದ ಅವರು ಅನೇಕ ಸಲಹೆಗಳನ್ನು ನೀಡಿದ್ದಾರೆ. `ಶಾಲೆಗಳಿಗೆ ನಿರಂತರವಾಗಿ ಗೈರಾಗುತ್ತಿರುವ ಮಕ್ಕಳನ್ನು ಗುರುತಿಸಿ ಅವರ ಬಗ್ಗೆ ವಿಶೇಷ ಗಮನ ಹರಿಸಬೇಕು. ಪೋಷಕರ ಮತ್ತು ವಿದ್ಯಾರ್ಥಿಯ ಮನವೊಲಿಸಿ ಶಾಲೆಗೆ ಬರುವಂತೆ ಮಾಡಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಮಾಡುವ ಜವಾಬ್ದಾರಿವಹಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಂಡಳಿಯು ಸಿದ್ದಪಡಿಸಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಡಯಟ್ ಮೂಲಕ ಸಿದ್ದಪಡಿಸಿರುವ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿಸಬೇಕು’ ಎಂದು ತಿಳಿಸಿದರು.
`ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ರ್ಯಾಂಕ್ ಬರುವುದು ಮುಖ್ಯವಲ್ಲ. ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊAದಿಗೆ ಪ್ರತಿಯೊಬ್ಬರೂ ಉತ್ತೀರ್ಣರಾಗಬೇಕಾಗಿರುವುದು ಮುಖ್ಯ’ ಎಂದು ಸೂಚಿಸಿದರು. `ಶಾಲಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಹೆಚ್ಚುವರಿ ಸಮಯವನ್ನು ಮೀಸಲಿಟ್ಟು ಕಲಿಕೆಯಲ್ಲಿ ಹಿಂದುಳಿದಿರುವ ವಿಷಯಗಳನ್ನು ಬೋಧಿಸಬೇಕು. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಬೇಕು. ಯಾವುದೇ ಪ್ರಶ್ನೆಗೂ ಉತ್ತರವನ್ನು ಖಾಲಿ ಬಿಡದೇ, ಸಾಧ್ಯವಾದಷ್ಟು ಉತ್ತರ ಬರೆಯಲು ಪ್ರಯತ್ನಿಸುವ ಬಗ್ಗೆ ಶಿಕ್ಷಕರು ತಿಳಿಸಬೇಕು. ಫಲಿತಾಂಶ ವೃದ್ಧಿಗೆ ಈಗಾಗಲೇ ರೂಪಿಸಿರುವ 29 ಅಂಶಗಳ ಅನುಷ್ಠಾನ ಮಾತ್ರವಲ್ಲದೇ, ಶಿಕ್ಷಕರು ಮತ್ತು ಪೋಷಕರು ಹಾಗೂ ಅಧಿಕಾರಿಗಳು ಸಂಘಟಿತ ಪ್ರಯತ್ನದ ಮೂಲಕ ಉತ್ತಮ ಫಲಿತಾಂಶ ಬರುವಂತೆ ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ ಸೂಚಿಸಿದರು.
ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕಿ ಲತಾ ನಾಯ್ಕ, ಡಯಟ್ ಪ್ರಾಂಶುಪಾಲ ಎನ್ ಆರ್ ಹೆಗಡೆ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕು ಶಿಕ್ಷಣಾಧಿಕಾರಿಗಳು ಹಾಗೂ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಸಭೆಯಲ್ಲಿದ್ದರು.