ಜೀವನದ ಪ್ರತಿ ಹಂತದಲ್ಲೂ ಸವಾಲುಗಳು ಎದುರಾಗುವುದು ಸಹಜ. ಆದರೆ ಆ ಸವಾಲುಗಳಿಗೆ ಹೆದರಿ ಬದುಕನ್ನೇ ಕೊನೆಗೊಳಿಸಿಕೊಳ್ಳುವ ನಿರ್ಧಾರ ತೀರಾ ದುರದೃಷ್ಟಕರ. ಯಾವುದೋ ಕ್ಷಣಿಕ ಆವೇಶಕ್ಕೆ ಬಲಿಯಾಗಿ ಅಥವಾ ಜೀವನದ ಸವಾಲುಗಳನ್ನು ಎದುರಿಸಲಾಗದೆ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗುವುದು ಕೇವಲ ವೈಯಕ್ತಿಕ ದುರಂತವಲ್ಲ, ಅದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ‘ಮಾನಸಿಕ ದೌರ್ಬಲ್ಯ.
ಈಚೆಗೆ ಅಂಕೋಲಾದಲ್ಲಿ ಯುವಕನೊಬ್ಬ ಪತ್ರ ಬರೆದಿಟ್ಟು ಜೀವನ ಅಂತ್ಯಗೊಳಿಸಿಕೊಂಡಿದ್ದು, ವೈದ್ಯೆಯೊಬ್ಬರ ಮಗಳು ಫಲಿತಾಂಶದ ಒತ್ತಡಕ್ಕೆ ಬಲಿಯಾದದ್ದು, ಅಥವಾ ಕಾರವಾರದಲ್ಲಿ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು – ಇವೆಲ್ಲವೂ ತೀವ್ರವಾದ ಮಾನಸಿಕ ಖಿನ್ನತೆ ಮತ್ತು ಒತ್ತಡದ ಪ್ರತಿಫಲನಗಳೇ ಹೊರತು ಮತ್ತೇನೂ ಅಲ್ಲ. ದುರಂತವೆಂದರೆ, ಇಂದಿನ ಸಮಾಜವು ಪ್ರತಿಯೊಂದು ಸಾವಿನಲ್ಲೂ ಧಾರ್ಮಿಕ ಬಣ್ಣ ಅಥವಾ ರಾಜಕೀಯ ಲಾಭವನ್ನು ಹುಡುಕಲು ಹೊರಟಿರುವುದು ಖೇದಕರ.
ಪ್ರೀತಿ-ಪ್ರೇಮ ಎಂಬುದು ಎರಡು ಮನಸ್ಸುಗಳ ನಡುವಿನ ತೀರಾ ವೈಯಕ್ತಿಕ ಭಾವನೆ. ಅಲ್ಲಿ ಮೂಡುವ ಭಿನ್ನಾಭಿಪ್ರಾಯಗಳಾಗಲಿ ಅಥವಾ ವೈಫಲ್ಯಗಳಾಗಲಿ ಸಾವಿಗೆ ಕಾರಣವಾಗಬಾರದು. ನಮ್ಮ ಸಮಾಜವು ಇಂದು ಎತ್ತ ಸಾಗುತ್ತಿದೆ ಎಂಬುದು ಗಂಭೀರ ಚಿಂತನೆಯ ವಿಷಯವಾಗಿದೆ. ದುರದೃಷ್ಟವಶಾತ್, ಪ್ರತಿ ಸಾವಿನಲ್ಲೂ ನಾವು ಧರ್ಮದ ಬಣ್ಣ ಅಥವಾ ರಾಜಕೀಯದ ಲಾಭವನ್ನು ಹುಡುಕುವ ಕೆಟ್ಟ ಚಾಳಿಯನ್ನು ಬೆಳೆಸಿಕೊಂಡಿದ್ದೇವೆ. ಯಾರೋ ಒಬ್ಬರು ಮಾನಸಿಕ ದೌರ್ಬಲ್ಯದಿಂದ ತೆಗೆದುಕೊಂಡ ನಿರ್ಧಾರವನ್ನು ಇಡೀ ಸಮುದಾಯದ ಅಥವಾ ರಾಜಕೀಯ ಸಿದ್ಧಾಂತದ ಸಂಘರ್ಷವನ್ನಾಗಿ ಪರಿವರ್ತಿಸುವುದು ಮಾನವೀಯತೆಯ ದೃಷ್ಟಿಯಿಂದ ಅಕ್ಷಮ್ಯ ಅಪರಾಧ. ಇಂತಹ ಘಟನೆಗಳು ನಡೆದಾಗ ಸುಳ್ಳು ಸುದ್ದಿಗಳ ಮೂಲಕ ಪೊಲೀಸರ ಮೇಲೆ ಅನಗತ್ಯ ಒತ್ತಡ ಹೇರುವುದು ಸರಿಯಲ್ಲ. ಇಂತಹ ಒತ್ತಡದಿಂದಾಗಿ ತನಿಖಾ ಸಂಸ್ಥೆಗಳು ಮುಗ್ಧರನ್ನು ವಿಚಾರಣೆಗೆ ಒಳಪಡಿಸಿದಾಗ, ಅವರು ಅನುಭವಿಸುವ ಮಾನಸಿಕ ಯಾತನೆ ಮತ್ತೊಂದು ಆತ್ಮಹತ್ಯೆಗೆ ದಾರಿ ಮಾಡಿಕೊಡುವ ಅಪಾಯವಿರುತ್ತದೆ.
ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಜೀವಗಳು ಹೀಗೆ ಅರ್ಧದಲ್ಲೇ ಮರೆಯಾಗುತ್ತಿವೆ. ಕರ್ನಾಟಕದಲ್ಲಿಯೂ ಈ ಸಂಖ್ಯೆ ಕಡಿಮೆ ಏನಿಲ್ಲ. ಈ ಎಲ್ಲ ಸಾವುಗಳ ಹಿಂದೆ ಪ್ರಚೋದನೆಗಿಂತ ಹೆಚ್ಚಾಗಿ ಕಾಣುವುದು ಒಳಗಿನ ಒಂಟಿತನ ಮತ್ತು ಅತೀವವಾದ ಖಿನ್ನತೆ. ಮಕ್ಕಳಿಗೆ ಕೇವಲ ಅಂಕಗಳನ್ನು ಗಳಿಸುವುದನ್ನಷ್ಟೇ ಕಲಿಸಿದರೆ ಸಾಲದು, ಸೋತಾಗ ಎದ್ದು ನಿಲ್ಲುವ ಕೆಚ್ಚನ್ನು ಕಲಿಸಬೇಕಿದೆ. ಬದುಕು ಎಂದರೆ ಕೇವಲ ಯಶಸ್ಸಲ್ಲ, ಅದು ಎಡವಿ ಬಿದ್ದಾಗ ಧೂಳು ಕೊಡವಿಕೊಂಡು ಮತ್ತೆ ನಡೆಯುವ ಅದ್ಭುತ ಕಲೆ ಎಂಬ ಅರಿವು ಮೂಡಿಸಬೇಕಿದೆ. ಪೋಷಕರು ತಮ್ಮ ಮಕ್ಕಳೊಂದಿಗೆ ಸ್ನೇಹಿತರಂತೆ ಬೆರೆತು ಅವರ ಮನಸ್ಸಿನ ಆಳದ ನೋವನ್ನು ಅರಿಯುವ ಕೆಲಸ ಮಾಡಬೇಕು. ಸಮಾಜ ಕೂಡ ಇಂತಹ ವಿಚಾರಗಳಲ್ಲಿ ಪಕ್ವತೆಯನ್ನು ಮೆರೆಯಬೇಕಿದೆ. ಒಂದು ಘಟನೆ ನಡೆದಾಗ ಅದಕ್ಕೆ ವೈಯಕ್ತಿಕ ಕಾರಣಗಳನ್ನು ಹುಡುಕಿ ಪರಿಹಾರ ಸೂಚಿಸುವ ಬದಲು, ಲಾಭ-ನಷ್ಟದ ಲೆಕ್ಕಾಚಾರ ಹಾಕುವುದು ನಾಗರಿಕ ಸಮಾಜಕ್ಕೆ ಶೋಭೆಯಲ್ಲ. ಯಾರನ್ನೂ ದೂಷಿಸುವುದರಿಂದ ಅಥವಾ ಯಾರ ಮೇಲೋ ಆಕ್ರೋಶ ಹೊರಹಾಕುವುದರಿಂದ ಕಳೆದುಹೋದ ಜೀವ ಮರಳಿ ಬರುವುದಿಲ್ಲ. ಬದಲಾಗಿ, ಇನ್ನು ಮುಂದೆ ಯಾವ ಜೀವವೂ ಹೀಗೆ ಬಲಿಯಾಗದಂತೆ ತಡೆಯುವ ಕರುಣಾಭರಿತ ವಾತಾವರಣವನ್ನು ನಾವು ನಿರ್ಮಿಸಬೇಕು. ಬದುಕುವ ಆಸೆ ಕಳೆದುಕೊಂಡವರಿಗೆ ಧರ್ಮದ ಭಾಷಣಕ್ಕಿಂತ, “ನಾನಿದ್ದೇನೆ ನಿನ್ನ ಜೊತೆ” ಎಂಬ ಪ್ರೀತಿಯ ಸಾಂತ್ವನ ಹೆಚ್ಚು ಶಕ್ತಿಯನ್ನು ನೀಡುತ್ತದೆ.
ಬದುಕು ಮತ್ತು ಸಾವಿನ ನಡುವಿನ ಅಂತರ ಬಹಳ ಚಿಕ್ಕದು. ಆದರೆ ಇಂದು ಆ ಅಂತರವನ್ನು ಮಾನಸಿಕ ದೌರ್ಬಲ್ಯ ಒಂದು ಕಡೆ ತಗ್ಗಿಸುತ್ತಿದ್ದರೆ, ನಮ್ಮ ಕೈಯಲ್ಲಿರುವ ಮೊಬೈಲ್ ಫೋನ್‌ಗಳು ಮತ್ತು ಸಾಮಾಜಿಕ ಜಾಲತಾಣದ ಹುಚ್ಚು ಗೀಳು ಮತ್ತೊಂದು ಕಾರಣವಾಗಿದೆ. ಕೇವಲ ಪ್ರಚಾರಕ್ಕಾಗಿ ಅಥವಾ ಸೇಡಿಗಾಗಿ ಒಬ್ಬರ ವ್ಯಕ್ತಿತ್ವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಾಜಿಗಿಟ್ಟು ಅವರ ಪ್ರಾಣ ತೆಗೆಯುವ ಮಟ್ಟಕ್ಕೆ ಈ ವಿಕೃತಿ ತಲುಪಿರುವುದು ಭಯಾನಕ. ಕೇರಳದಲ್ಲಿ ಇತ್ತೀಚೆಗೆ ನಡೆದ ಘಟನೆ ಇಡೀ ಸಮಾಜ ತಲೆತಗ್ಗಿಸುವಂತಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ಪುರುಷನೊಬ್ಬ ಅನುಚಿತವಾಗಿ ವರ್ತಿಸಿದನೆಂದು ಸುಳ್ಳು ಆರೋಪ ಹೊರಿಸಿ ವಿಡಿಯೋ ವೈರಲ್ ಮಾಡಿದ್ದಳು. ಆ ವಿಡಿಯೋ ಸೃಷ್ಟಿಸಿದ ಮುಜುಗರ ಮತ್ತು ಅಪಮಾನವನ್ನು ತಾಳಲಾರದೆ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರು. ಪ್ರಾಥಮಿಕ ತನಿಖೆಯಲ್ಲಿ ಆತನದ್ದು ಯಾವುದೇ ತಪ್ಪಿಲ್ಲ ಎಂದು ಸಾಬೀತಾಗಿ ಇಂದು ಆ ಯುವತಿ ಕಂಬಿ ಎಣಿಸುತ್ತಿದ್ದಾಳೆ. ಆದರೆ ಕಳೆದುಹೋದ ಆ ಮುಗ್ಧ ಜೀವ ಮರಳಿ ಬರಲು ಸಾಧ್ಯವೇ? ಇದೇ ರೀತಿಯ ಘಟನೆಯೊಂದು ನಮ್ಮಲ್ಲೂ ನಡೆದಿದ್ದು, ಯುವಕನೊಬ್ಬನ ವಿರುದ್ಧ ವಿಡಿಯೋ ಹರಿಬಿಟ್ಟಿದ್ದ ಯುವತಿ ಈಗ ಸದ್ದಿಲ್ಲದೆ ತನ್ನ ಖಾತೆಯಿಂದ ಅದನ್ನು ಅಳಿಸಿ ಹಾಕಿದ್ದಾಳೆ. ಕೇವಲ ಒಂದು ‘ಕ್ಲಿಕ್’ ಮೂಲಕ ಇನ್ನೊಬ್ಬರ ಜೀವನವನ್ನು ನಾಶಮಾಡುವ ಈ ಪ್ರವೃತ್ತಿ ಅತ್ಯಂತ ಅಪಾಯಕಾರಿ.
ಇನ್ನೊಂದೆಡೆ, ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದ ಪ್ರಸಿದ್ಧ ಪಿಕಳೆ ನರ್ಸಿಂಗ್ ಹೋಮ್‌ನ ಫಾರ್ಮಸಿ ಇನ್‌ಚಾರ್ಜ್ ರಾಜು ಅವರ ಸಾವು ನಮ್ಮನ್ನು ಬೆಚ್ಚಿಬೀಳಿಸಿದೆ. ಅವಧಿ ಮೀರಿದ ಔಷಧಿ ನೀಡಿದ್ದಾರೆಂದು ವ್ಯಕ್ತಿಯೊಬ್ಬ ಹರಿಬಿಟ್ಟ ವಿಡಿಯೋದಿಂದ ಮನನೊಂದು ಅವರು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾದರು ಎನ್ನಲಾಗುತ್ತಿದೆ. ಅವಧಿ ಮೀರಿದ್ದ ಔಷಧಿ ನೀಡಿದ್ದನ್ನು ಅವರು ಒಪ್ಪಿಕೊಂಡು, ಅಂದೇ ಕ್ಷಮೆಯನ್ನೂ ಯಾಚಿಸಿದ್ದರು. ಆದರೆ, ವೈರಲ್ ಆಗಿದ್ದ ವಿಡಿಯೋ ಹರಿದಾಡುತ್ತಲೇ ಇತ್ತು. ಅಪಮಾನದ ಭೀತಿ ಮತ್ತು ಮಾನಸಿಕ ಕುಸಿತ ಒಬ್ಬ ವ್ಯಕ್ತಿಯನ್ನು ಸಾವಿನ ಅಂಚಿಗೆ ತಳ್ಳುತ್ತಿದೆ. ಪ್ರತಿಯೊಂದು ಘಟನೆಯನ್ನು ಧಾರ್ಮಿಕವಾಗಿ ಅಥವಾ ರಾಜಕೀಯವಾಗಿ ನೋಡಿ, ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರದ ಹಪಹಪಿಗೆ ಬಿದ್ದಿರುವ ಜನರಿಗೆ, ಆ ಸಾವುಗಳು ನೀಡುವ ನೋವಿನ ಅರಿವೇ ಇಲ್ಲದಂತಾಗಿದೆ.
ಸಾವಿನ ಸುತ್ತ ಸಂಭ್ರಮಿಸುವ ಮತ್ತು ತಪ್ಪು-ಒಪ್ಪುಗಳ ವಿವೇಚನೆ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಧೀಶರಂತೆ ವರ್ತಿಸುವ ಈ ವಿಕೃತ ಮನಸ್ಥಿತಿಯನ್ನು ಸಮಾಜ ಬಿಡಬೇಕಿದೆ. ಆರೋಪ ಸಾಬೀತಾಗುವ ಮುನ್ನವೇ ಒಬ್ಬರ ವ್ಯಕ್ತಿತ್ವ ಹರಣ ಮಾಡುವುದು ಅಕ್ಷಮ್ಯ. ಪೊಲೀಸರ ಮೇಲೆ ಒತ್ತಡ ಹೇರುವುದು, ರಾಜಕೀಯ ಲಾಭಕ್ಕಾಗಿ ಸಾವನ್ನು ಬಳಸಿಕೊಳ್ಳುವುದು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದೆ. ನಮಗೆ ಇಂದು ಬೇಕಿರುವುದು ಪರಸ್ಪರ ಗೌರವಿಸುವ ಮತ್ತು ಬದುಕುವ ಹಕ್ಕನ್ನು ಎತ್ತಿಹಿಡಿಯುವ ಮಾನವೀಯ ಸಮಾಜ. ಇನ್ನೊಬ್ಬರ ಬದುಕನ್ನು ನೋಯಿಸುವ ಮುನ್ನ, ಆ ಸ್ಥಾನದಲ್ಲಿ ನಾವಿದ್ದರೆ ಎಂಬ ಕನಿಷ್ಠ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಮೂಡಬೇಕಿದೆ. ಬದುಕು ಸುಂದರವಾಗಿದೆ, ಅದನ್ನು ಕ್ಷುಲ್ಲಕ ಕಾರಣಗಳಿಗಾಗಿ ಅಥವಾ ಸಾಮಾಜಿಕ ಜಾಲತಾಣದ ಅಬ್ಬರಕ್ಕೆ ಬಲಿಯಾಗದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮದಾಗಲಿ.
ಲೇಖಕರು:

ಮಾಧವ ಬಿ ನಾಯಕ
ಅಧ್ಯಕ್ಷರು, ಜನಶಕ್ತಿ ವೇದಿಕೆ