ಕಾರವಾರದ ಜೆಡಿಎಸ್ ಮುಖಂಡೆ ಚೈತ್ರಾ ಕೋಠಾರಕರ್ ಅವರ ಪುತ್ರ ಚಿರಾಗ ಕೋಠಾರಕರ್ ಕಾಟಕ್ಕೆ ಬೇಸತ್ತು ಸಾವಿಗೆ ಶರಣಾಗಿರುವ ರೀಶಲ್ ಡಿಸೋಜಾ ಅವರ ದೇಹದ ಮೇಲೆ ಅನುಮಾನಾಸ್ಪದ ಕುರುಹುಗಳು ಪತ್ತೆಯಾಗಿದೆ. ರೀಶಲ್ ಡಿಸೋಜಾ ಅವರ ಮೇಲೆ ಚಿರಾಗ ಕೋಠಾರಕರ್ ಅತ್ಯಾಚಾರವೆಸಗಿದ ಅನುಮಾನ ಅವರ ಕುಟುಂಬವನ್ನು ಕಾಡುತ್ತಿದೆ.
ಕಾರವಾರದ ಕದ್ರಾದಲ್ಲಿ ರೀಶಲ್ ಡಿಸೋಜಾ ಅವರು ವಾಸವಾಗಿದ್ದರು. ರೀಶಲ್ ಡಿಸೋಜಾ ಅವರು ಗಗನ ಸಖಿ ಆಗುವ ಕನಸು ಕಂಡಿದ್ದರು. ರೀಶಲ್ ಡಿಸೋಜಾ ಅವರ ಕನಸಿಗೆ ಅವರ ಕುಟುಂಬದವರು ಸಹಕಾರ ನೀಡಿದ್ದು, ಕದ್ರಾ ಗ್ರಾಮ ಪಂಚಾಯತ ಸದಸ್ಯರಾಗಿರುವ ರೀನಾ ಡಿಸೋಜಾ ಅವರು ಮಗಳನ್ನು ಮುದ್ದಾಗಿ ಬೆಳೆಸಿದ್ದರು. ಮಗಳ ಆಸೆಯಂತೆ ರೀಶಲ್ ಡಿಸೋಜಾ ಅವರನ್ನು ಬೆಂಗಳೂರಿನ ಡಾನ್ ಬಸ್ಕೋ ಕಾಲೇಜಿಗೆ ದಾಖಲಿಸಿದ್ದರು.
2021-22ರ ಅವಧಿಯಲ್ಲಿ ರೀಶಲ್ ಡಿಸೋಜಾ ಅವರು ಕಾರವಾರದ ಸೆಂಟ್ ಜೋಸೆಪ್ ವಿದ್ಯಾಲಯದಲ್ಲಿ ಓದುತ್ತಿದ್ದರು. ಆಗ, ಅದೇ ವಿದ್ಯಾಲಯದಲ್ಲಿ ಕಲಿಕೆಗೆ ಬಂದಿದ್ದ ಚಿರಾಗ ಕೋಠಾರಕರ್ ಅವರು ರೀಶಲ್ ಡಿಸೋಜಾ ಅವರಿಗೆ ಪರಿಚಯವಾಗಿದ್ದರು. ಚಿರಾಗ ಕೋಠಾರಕರ್ ಅವರು ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಚೈತ್ರಾ ಕೋಠಾರಕರ್ ಅವರ ಪುತ್ರರಾಗಿದ್ದು, ಅಲ್ಪ ಪ್ರಮಾಣದಲ್ಲಿ ರಾಜಕೀಯ ಪ್ರಭಾವವನ್ನು ಹೊಂದಿದ್ದರು. ಚಿರಾಗ ಕೋಠಾರಕರ್ ಅವರ ತಂದೆ ಚಂದ್ರಹಾಸ ಕೋಠಾರಕರ್ ಅವರು ಸಹ ರಾಜಕಾರಣಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದರು.
ಹೀಗಿರುವಾಗ ಚಿರಾಗ ಕೋಠಾರಕರ್ ಅವರು ರೀಶಲ್ ಡಿಸೋಜಾ ಅವರಿಗೆ ಪ್ರೀತಿಯ ಸಂದೇಶ ರವಾನಿಸಿದ್ದರು. `ತನ್ನನ್ನು ಪ್ರೀತಿಸು’ ಎಂದು ದುಂಬಾಲು ಬಿದ್ದಿದ್ದರು. ಪ್ರೀತಿ ನಿರಾಕರಿಸಿದ ಕಾರಣ ಪೀಡಿಸಲು ಶುರು ಮಾಡಿದ್ದರು. ಚಿರಾಗ ಕೋಟಾರಕರ್ ಕಾಟದ ಬಗ್ಗೆ ರೀಶಲ್ ಡಿಸೋಜಾ ಅವರು ತಾಯಿ ಬಳಿ ಹೇಳಿಕೊಂಡಿದ್ದರು. `ಪ್ರೀತಿ ಪ್ರೇಮದ ಬಗ್ಗೆ ಚಿಂತಿಸದೇ ಭವಿಷ್ಯದ ಬಗ್ಗೆ ಯೋಚಿಸು’ ಎಂದು ರೀನಾ ಡಿಸೋಜಾ ಅವರು ಮಗಳಿಗೆ ಬುದ್ದಿ ಹೇಳಿದ್ದರು. ಆ ಮೂಲಕ ಮಗಳಿಗೆ ಭವಿಷ್ಯದ ಕನಸುಗಳ ಬಗ್ಗೆ ರೀನಾ ಡಿಸೋಜಾ ಅವರು ಸ್ಪಷ್ಟವಾದ ಕಲ್ಪನೆ ನೀಡಿದ್ದರು.
ಅದರ ಪ್ರಕಾರವೇ ರೀಶಲ್ ಡಿಸೋಜಾ ಓದಿಕೊಂಡಿದ್ದು, ಗಗನ ಸಖಿ ಆಗಬೇಕು ಎಂದು ಕನಸು ಕಂಡಿದ್ದರು. ಈ ನಡುವೆ 20205 ಏಪ್ರಿಲ್ ಅವಧಿಯಲ್ಲಿ ಚಿರಾಗ ಕೋಠಾರಕರ್ ಅವರ ಸಹೋದರ ಸಂಬoಧಿಯಿoದ ರೀನಾ ಡಿಸೋಜಾ ಅವರಿಗೆ ಫೋನ್ ಬಂದಿತು. `ಎಷ್ಟು ಫೋನ್ ಮಾಡಿದರೂ ರೀಶಲ್ ಡಿಸೋಜಾ ಫೋನ್ ಸ್ವೀಕರಿಸುತ್ತಿಲ್ಲ. ಚಿರಾಗ್ ಕೋಠಾರಕರ್ ಫೋನ್ ಸ್ವೀಕರಿಸದೇ ಇದ್ದರೆ ಸರಿಯಿರುವುದಿಲ್ಲ’ ಎಂದು ಫೋನ್ ಮಾಡಿದವರು ಎಚ್ಚರಿಕೆ ನೀಡಿದ್ದರು. ಆ ಕ್ಷಣಕ್ಕೆ ಹೆದರಿದ್ದ ರೀನಾ ಡಿಸೋಜಾ ಆ ಫೋನ್ ಕರೆ ಕಟ್ ಮಾಡಿದ್ದರು. ಬೆದರಿಕೆಯ ಫೋನ್ ಬಂದ ಬಗ್ಗೆ ಯಾರಲ್ಲಿಯೂ ಹೇಳಿರಲಿಲ್ಲ.
ಕಳೆದ ನಾಲ್ಕು ತಿಂಗಳಿನಿoದ ರೀಶಲ್ ಡಿಸೋಜಾ ಅವರ ನಡುವಳಿಕೆಯಲ್ಲಿ ಬದಲಾವಣೆ ಆಗಿರುವುದನ್ನು ರೀನಾ ಡಿಸೋಜಾ ಅವರು ಗಮನಿಸಿದ್ದರು. ಸದಾ ಲವಲವಿಕೆಯಿಂದಿರುತ್ತಿದ್ದ ರೀಶಲ್ ಡಿಸೋಜಾ ಈಚೆಗೆ ಮಂಕಾಗಿದ್ದರು. ಚಿರಾಗ ಕೋಠಾರಕರ್ ಅವರ ಮಾನಸಿಕ ಹಿಂಸೆಯೇ ಇದಕ್ಕೆ ಕಾರಣ ಎಂಬುದು ರೀನಾ ಡಿಸೋಜಾ ಅವರಿಗೆ ನಂತರ ಅರ್ಥವಾಯಿತು. ಮೊನ್ನೆ ಏರ್‌ಫೋನ್ ಹಾಕಿಕೊಂಡು ಮಾತನಾಡುತ್ತಿರುವಾಗಲೇ ರೀಶಲ್ ಡಿಸೋಜಾ ನೇಣು ಹಾಕಿಕೊಂಡರು. ಅವರು ಸಾವನಪ್ಪಿದ ನಂತರ ಶವದ ಮೇಲೆ ಗಾಯದ ಗುರುತಿರುವುದನ್ನು ರೀನಾ ಡಿಸೋಜಾ ಅವರು ಗಮನಿಸಿದರು.
ಈ ಹಿನ್ನಲೆ ಚಿರಾಗ ಕೋಠಾರಕರ್ ಅವರು ರೀಶಲ್ ಅವರ ಮೇಲೆ ಅತ್ಯಾಚಾರವೆಸಗಿ, ಬ್ಲಾಕ್ ಮೇಲ್ ಮಾಡುತ್ತಿದ್ದು ಅದೇ ನೋವಿನಲ್ಲಿ ರೀಶಲ್ ಸಾವನಪ್ಪಿರುವ ಶಂಕೆವ್ಯಕ್ತಪಡಿಸಿದರು. ಈ ಬಗ್ಗೆ ಸಮಗ್ರ ತನಿಖೆಗಾಗಿ ಅವರು ಒತ್ತಾಯಿಸಿದರು. ಸದ್ಯ ಈ ಎಲ್ಲಾ ವಿಷಯದ ಬಗ್ಗೆ ರೀಶಲ್ ಡಿಸೋಜಾ ಅವರ ತಾಯಿ ರೀನಾ ಡಿಸೋಜಾ ಅವರು ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದಿದ್ದು, ಅದರಲ್ಲಿ ತಮ್ಮ ಅಂತರಾಳದ ನೋವು ತೋಡಿಕೊಂಡಿದ್ದಾರೆ.