ಕಾರವಾರ – ಅಂಕೋಲಾ ಮಾರ್ಗವಾಗಿ ಸಂಚರಿಸುವ ಟ್ಯಾಂಕರ್ ಬೈಕ್ ಸವಾರನ ಪ್ರಾಣ ತೆಗೆದಿದೆ. ಶಿಕ್ಷಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಅಪಘಾತದಲ್ಲಿ ಸಾವನಪ್ಪಿದ್ದಾರೆ.
ಕಾರವಾರ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ 66ರ ಬಿಣಗಾ ಬಳಿ ಶನಿವಾರ ಸಂಜೆ ಅಪಘಾತ ನಡೆದಿದೆ. ಜೋರಾಗಿ ಸಂಚರಿಸಿದ ಟ್ಯಾಂಕರ್ ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕಿನಲ್ಲಿ ಬರುತ್ತಿದ್ದವನ ತಲೆ ಒಡೆದಿದ್ದು, ಹೆದ್ದಾರಿ ಮೇಲೆ ರಕ್ತ ಹರಿದಿದೆ. ಅಪಘಾತದ ನಂತರ ಟ್ಯಾಂಕರ್ ಚಾಲಕ ತನ್ನ ವಾಹನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ ಚಾಲಕನನ್ನು ವಶಕ್ಕೆಪಡೆದಿದ್ದಾರೆ.
ಡಾಂಬರ್ ಹೊತ್ತ ಟ್ಯಾಂಕರ್ ಕಾರವಾರದಿಂದ ಅಂಕೋಲಾ ಕಡೆ ಹೊರಟಿತ್ತು. ಕಾರವಾರ ನಗರ ಪ್ರದೇಶ ಮುಗಿದ ನಂತರ ಟ್ಯಾಂಕರ್ ವೇಗ ಹೆಚ್ಚಾಯಿತು. ಬಿಣಗಾ ಬಳಿ ಟ್ಯಾಂಕರ್ ಅಡ್ಡಾದಿಡ್ಡಿ ಚಲಿಸಿದ್ದು, ಎದುರಿನಿಂದ ಬರುತ್ತಿದ್ದ ಬೈಕಿಗೆ ರಭಸವಾಗಿ ಗುದ್ದಿತು. ಈ ಅಪಘಾತದಲ್ಲಿ ಬೈಕ್ ಸವಾರನ ಮುಖ ಕಾಣದ ಹಾಗೇ ಜರ್ಜರಿತವಾಯಿತು. ಬೈಕ್ ಸಂಪೂರ್ಣವಾಗಿ ಜಖಂ ಆಗಿದೆ. ಡಿಡಿಪಿಐ ಕಚೇರಿಯಲ್ಲಿ ಕ್ಲರ್ಕ ಆಗಿದ್ದ ದಿನಕರ ಗುನಗಿ ಅವರು ಈ ಬೈಕಿನಲ್ಲಿದ್ದ ಬಗ್ಗೆ ಮಾಹಿತಿಯಿದ್ದು, ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ.
ದಿನಕರ ಗುನಗಿ ಅವರು ಬಿಣಗಾದಲ್ಲಿ ನಡೆಯುವ ಜಾತ್ರೆಗೆ ತಮ್ಮ ಪತ್ನಿ ಬಿಟ್ಟು ಮರಳುತ್ತಿದ್ದರು. ಅಪಘಾತದಲ್ಲಿ ಟ್ಯಾಂಕರ್ ಹಿಂದಿನ ಚಕ್ರ ಅವರ ತಲೆ ಮೇಲೆ ಹತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.