ನೆಲ್ಲೂರಿನಿoದ ಶಿರಸಿಗೆ ಬರುತ್ತಿದ್ದ ಬಸ್ಸಿನಲ್ಲಿ ಮಹಿಳೆಯೊಬ್ಬರು ಬ್ಯಾಗ್ ಬಿಟ್ಟು ಹೋಗಿದ್ದು, ಆ ಬ್ಯಾಗನ್ನು ಬಸ್ಸಿನ ಕಂಡೆಕ್ಟರ್ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಮಂಗಳವಾರ ಶಾರದಾ ಎಂಬಾತರು ನೆಲ್ಲೂರಿನಿಂದ ಸರ್ಕಾರಿ ಬಸ್ಸು ಹತ್ತಿದ್ದು, ಶಿರಸಿಗೆ ಬಂದು ತಲುಪಿದ್ದರು. ಬಸ್ಸಿನಿಂದ ಇಳಿಯವ ಆತುರದಲ್ಲಿ ಅವರು ತಮ್ಮ ಬ್ಯಾಗನ್ನು ಬಸ್ಸಿನಲ್ಲಿಯೇ ಮರೆತಿದ್ದರು. ಆ ಬ್ಯಾಗಿನಲ್ಲಿ 16 ಸಾವಿರ ರೂ ಹಣದ ಜೊತೆ ಕೆಲ ಮಹತ್ವದ ಕಾಗದ ಪತ್ರಗಳಿದ್ದವು. ಬ್ಯಾಗ್ ಕಳೆದ ಬಗ್ಗೆ ಶಾರದಾ ಅವರ ಅರಿವಿಗೆ ಬಂದ ನಂತರ ಅವರು ಆತಂಕಕ್ಕೆ ಒಳಗಾಗಿದ್ದರು.
ಬಸ್ಸಿನಲ್ಲಿ ಬ್ಯಾಗ್ ಕಂಡ ಕಂಡೆಕ್ಟರ್ ಮಂಜುನಾಥ್ ಚೆಲುವಾದಿ ಆ ಮಹಿಳಾ ಪ್ರಯಾಣಿಕರ ಹುಡುಕಾಟ ನಡೆಸಿದರು. ಕೊನೆಗೆ ಬಸ್ ನಿಲ್ದಾಣದ ಸಂಚಾರ ನಿಯಂತ್ರಕ ರಾಮಚಂದ್ರ ಶೆಟ್ಟಿ ಅವರಿಗೆ ಬ್ಯಾಗ್ ಸಿಕ್ಕ ವಿಷಯ ಮುಟ್ಟಿಸಿದರು. ಅಲ್ಲಿದ್ದ ನಾಗೇಂದ್ರ ಬೈಂದೂರು ಅವರು ಬ್ಯಾಗನ್ನು ಜೋಪಾನ ಮಾಡಿದ್ದು, ಈ ವೇಳೆ ಶಾರದಾ ಅವರು ಅಲ್ಲಿಗೆ ಬಂದು ಬ್ಯಾಗ್ ಕಾಣೆಯಾದ ವಿಷಯ ತಿಳಿಸಿದರು.
ಮಂಜುನಾಥ್ ಚೆಲುವಾದಿ ಅವರು ಬ್ಯಾಗ್ ಮುಟ್ಟಿಸಿದ ವಿಷಯ ತಿಳಿಸಿ ಮಹಿಳೆಗೆ ಅವರ ಸ್ವತ್ತನ್ನು ಸಾರಿಗೆ ಸಿಬ್ಬಂದಿ ನೀಡಿದರು. ಬ್ಯಾಗ್ ಮರಳಿ ಸಿಕ್ಕಿದಕ್ಕೆ ಶಾರದಾ ಅವರು ಹರ್ಷವ್ಯಕ್ತಪಡಿಸಿದರು.