ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ದಾಂಡೇಲಿಯ ವಕೀಲ ಅಜೀತ ನಾಯ್ಕ ಅವರನ್ನು ಪಾಂಡುರoಗ ಕಾಂಬಳೆ ಅವರು ಕೊಚ್ಚಿ ಕೊಲೆ ಮಾಡಿದ್ದು ಸಾಭೀತಾಗಿದೆ. ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಯಲ್ಲಾಪುರ ಪೀಠದಿಂದ ತೀರ್ಪು ನೀಡಿದ್ದಾರೆ. ಆರೋಪಿಗೆ ಮರಣ ದಂಡನೆ ಅಥವಾ ಜೀವಾವಧಿ ಜೈಲು ಶಿಕ್ಷೆ ನೀಡಲು ನ್ಯಾಯಾಧೀಶರು ನಿರ್ಧರಿಸಿದ್ದಾರೆ.
2018ರ ಜುಲೈ 27ರಂದು ದಾಂಡೇಲಿ ಅಯ್ಯಂಗಾರ್ ಬೇಕರಿ ಎದುರು ವಕೀಲ ಅಜೀತ ನಾಯ್ಕ ಅವರ ಬರ್ಬರ ಹತ್ಯೆಯಾಗಿತ್ತು. ಪಟೇಲ್ ಸರ್ಕಲ್ ಬದಿಯಿಂದ ದಾಂಡೇಲ್ ಬಸ್ ನಿಲ್ದಾಣ ಬಳಿ ಬರುವ ರಸ್ತೆಯಲ್ಲಿ ಅಜೀತ ನಾಯ್ಕ ಅವರ ಮೇಲೆ ದಾಳಿ ನಡೆದಿತ್ತು. ಭೂ ವಿವಾದದ ಪ್ರಕರಣವೊಂದರಲ್ಲಿ ಅಜೀತ ನಾಯ್ಕ ಅವರು ವಕಾಲತ್ತುವಹಿಸಿದನ್ನು ಪಾಂಡುರoಗ ಕಾಂಬಳೆ ಸಹಿಸಿರಲಿಲ್ಲ. ಹೀಗಾಗಿ ವಿನಾಯಕ ಕರ್ನಿಂಗ್, ಇ ಎಲ್ ಮಂಜುನಾಥ, ನಜೀರ ಅಹ್ಮದ್ ಲಾಲುಸಾಬ್ ಜಮಾಲಿ ಹಾಗೂ ಈಶ್ವರ ಶೆಟ್ಟಿಯಾರ್ ಎಂಬಾತರ ಜೊತೆ ಸೇರಿ ವಕೀಲ ಅಜಿತ ನಾಯ್ಕ ಅವರನ್ನು ಕೊಲೆ ಮಾಡಲು ಪಾಂಡುರoಗ ಕಾಂಬಳೆ ನಿರ್ಧರಿಸಿದ್ದರು.
ಆ ದಿನ ನೀಲಿ ಬಣ್ಣದ ಜರ್ಕೀನ್ ಧರಿಸಿ ಅದರೊಳಗೆ ಆಯುಧ ಅಡಗಿಸಿಟ್ಟುಕೊಂಡಿದ್ದ ಪಾಂಡುರoಗ ಕಾಂಬಳೆ, ಅಜಿತ ನಾಯ್ಕ ಅವರು ತಮ್ಮ ಕಚೇರಿಯಿಂದ ಹೊರ ಬರುವುದನ್ನು ಕಾಯುತ್ತಿದ್ದರು. ರಮೇಶ ನಾಯ್ಕ ಹಾಗೂ ಹನುಮಂತ ಕುಂಬಾರ ಅವರ ಜೊತೆ ದಾಂಡೇಲಿ ನಗರದ ಸಂಡೆ ಮಾರ್ಕೇಟ್ ಬಳಿ ಕಚೇರಿಯಿಂದ ಅಜಿತ್ ನಾಯ್ಕ ಅವರು ಹೊರ ಬರುತ್ತಿರುವಾಗಲೇ ಅವರ ಮೇಲೆ ದಾಳಿ ನಡೆಸಿದ್ದರು. ಅಜೀತ್ ನಾಯ್ಕ ಕೊಲೆ ನಂತರ ಜರ್ಕೀನ್ ಅನ್ನು ಹಾಳಾದ ಕಾರಿನ ಅಡಿ ಹುದುಗಿಸಿ, ಮೀನು ಮಾರುಕಟ್ಟೆ ಬಳಿಯಿದ್ದ ಬೈಕಿನಲ್ಲಿ ಆರೋಪಿ ಪರಾರಿ ಆಗಿದ್ದರು. ಹತ್ಯೆ ನಂತರವೂ ಆರೋಪಿತರು ಜೈಲಿನಲ್ಲಿಯೇ ಕುಳಿತು ಕಾಳಿ ನದಿ ದಂಡೆ ಮೇಲಿರುವ ಜಮೀನನ್ನು ಪ್ರವಾಸೋಧ್ಯಮಿಯೊಬ್ಬರಿಗೆ ಮಾರಾಟಕ್ಕೆ ಯತ್ನಿಸಿದ್ದರು. ಈ ಪ್ರಕರಣದ ಬಗ್ಗೆ ಆಗಿನ ಪಿಐ ಎ ಎ ಮುಜಾವರ್ ತನಿಖೆ ನಡೆಸಿದ್ದರು. ಪಿ ಸಿ ಮಂಜುನಾಥ ಎಚ್ ಶೆಟ್ಟಿ ಸಹಾಯಕ ತನಿಖಾಧಿಕಾರಿಯಾಗಿ ಕೆಲಸ ಮಾಡಿದರು. ನಂತರ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಈ ಪ್ರಕರಣ ಸಿಐಡಿ ತನಿಖೆಯವರೆಗೂ ಹೋಗಿತ್ತು.
ಪ್ರಕರಣ ನ್ಯಾಯಾಲಯಕ್ಕೆ ಬಂದಾಗ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ಪ್ರಕರಣದ ವಾದ ಶುರು ಮಾಡಿದರು. ಕೊಲೆ ಕುರಿತಾಗಿ ನಡೆಸಿದ ಸಂಚು, ಈ ಹಿಂದೆಯೂ ಆರೋಪಿತರು ವಕೀಲರ ಜೊತೆ ನಡೆಸಿದ ವಾಗ್ವಾದ, ಕೊಲೆಗೆ ಇದ್ದ ಕಾರಣದ ಬಗ್ಗೆ ರಾಜೇಶ ಮಳಗಿಕರ್ ಅವರು ನ್ಯಾಯಾಲಯಕ್ಕೆ ವಿವರಿಸಿದರು. ಆದರೆ, ಅಜೀತ ನಾಯ್ಕ ಅವರ ಕೊಲೆ ಪ್ರಕರಣದಲ್ಲಿ ಸಾಕ್ಷಿ ಹೇಳಲು ಸಾಕ್ಷಿದಾರರು ಹಿಂದೇಟು ಹಾಕಿದ್ದರು. ಕೊಲೆ ಆಗಿರುವುದನ್ನು ಕಣ್ಣಾರೆ ಕಂಡವರಿದ್ದರೂ ಅವರು ನ್ಯಾಯಾಲಯದ ಮುಂದೆ ಬರಲಿಲ್ಲ. ಅದಾಗಿಯೂ, ವಕೀಲರ ಮೇಲೆ ನಡೆದ ದಾಳಿಯನ್ನು ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ಸವಾಲಾಗಿ ಸ್ವೀಕರಿಸಿದ್ದು, ಸಾಂದರ್ಭಿಕ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. `ವಕೀಲರ ಮೇಲೆ ದಾಳಿ ಮಾಡಿ ಅವರ ಕೊಲೆಗೆ ಕಾರಣರಾದ ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು’ ಎಂದು ರಾಜೇಶ ಮಳಗಿಕರ್ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ವಾದ ಆಲಿಸಿದ ನ್ಯಾಯಾಲಯ ಪ್ರಮುಖ ಆರೋಪಿ ಪಾಂಡುರAಗ ಮಾರುತಿ ಕಾಂಬಳೆ ವಿರುದ್ಧ ಆರೋಪ ಸಾಬೀತಾಗಿದೆ ಎಂದು ಘೋಷಿಸಿತು. ಶಿಕ್ಷೆಯ ಪ್ರಮಾಣವನ್ನು ಜನವರಿ 13ರಂದು ಪ್ರಕಟಿಸಲು ನಿರ್ಧರಿಸಿತು. ಉಳಿದ ನಾಲ್ವರು ಆರೋಪಿಗಳನ್ನು ಸಾಕ್ಷಿ ಕೊರತೆಯಿಂದ ಖುಲಾಸೆಗೊಳಿಸಿತು.
ಪೊಲೀಸರಿಂದ ಅಭಿನಂದನೆ
ಸಮರ್ಥವಾಗಿ ವಾದ ಮಂಡಿಸಿ ಕೊಲೆಗಾರನಿಗೆ ಶಿಕ್ಷೆ ವಿಧಿಸಿದ ರಾಜೇಶ ಮಳಗಿಕರ್ ಅವರಿಗೆ ದಾಂಡೇಲಿ ಪೊಲೀಸರು ಅಭಿನಂದಿಸಿದರು. ಶಾಲು ಹೊದೆಸಿ ಸನ್ಮಾನಿಸಿದರು. ವಕೀಲರ ಮೇಲೆ ದಾಳಿನಡೆಸಿ ಅವರ ಹತ್ಯೆಗೆ ಕಾರಣರಾದವನಿಗೆ ಶಿಕ್ಷೆಯಾಗುವಂತೆ ಮಾಡಿದ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರನ್ನು ವಕೀಲರ ಸಂಘದವರು ಅಭಿನಂದಿಸಿದರು. `ಈ ಪ್ರಕರಣದಲ್ಲಿ ಉಳಿದ ನಾಲ್ವರು ಆರೋಪಿತರಿಗೂ ಶಿಕ್ಷೆ ಆಗಬೇಕಿತ್ತು. ಈ ಬಗ್ಗೆ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸುವದಕ್ಕೆ ಪತ್ರ ಬರೆಯಲಾಗುತ್ತದೆ’ ಎಂದು ರಾಜೇಶ ಮಳಗಿಕರ್ ಅವರು ಮಾಹಿತಿ ನೀಡಿದರು.