ಶಿರಸಿಗೆ ಬಂದಿದ್ದ ಸಚಿವ ಮಂಕಾಳು ವೈದ್ಯ ಅವರು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರಿಗೆ ಅವಮಾನ ಮಾಡಿದ್ದು, ಸದ್ಯ ಅನಂತಮೂರ್ತಿ ಹೆಗಡೆ ಅವರು ಆ ಅವಮಾನಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ.
ಶಿರಸಿಗೆ ಬಂದು ಸವಾಲು ಹಾಕಿದ ಸಚಿವರಿಗೆ ಉತ್ತರ ಕೊಡುವುದಕ್ಕಾಗಿ ಅನಂತಮೂರ್ತಿ ಹೆಗಡೆ ಅವರ ಅವರ ಸ್ವಕ್ಷೇತ್ರವಾದ ಭಟ್ಕಳಕ್ಕೆ ಹೋಗಿದ್ದಾರೆ. ಅಲ್ಲಿ ಸುದ್ದಿಗೋಷ್ಠಿ ನಡೆಸಿ ವಿವಿಧ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. `ಕಳೆದ 7 ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಒಂದೇ ಒಂದು ಬಸ್ ಹೊಸದಾಗಿ ಬಂದಿಲ್ಲ. ಈಗ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಮೇಲೆ ಹೊಸದಾಗಿ ಬಸ್ ಜಿಲ್ಲೆಗೆ ಖರೀದಿಸಲಾಗಿದೆ’ ಎಂದು ಮಂಕಾಳು ವೈದ್ಯ ಹೇಳಿದ್ದರು. ಆ ವೇಳೆಯಲ್ಲಿಯೇ ಅನಂತಮೂರ್ತಿ ಹೆಗಡೆ ಅದನ್ನು ವಿರೋಧಿಸಿದ್ದರು. `ಮಂಕಾಳ ವೈದ್ಯ ದಾಖಲೆಗಳಿಲ್ಲದೇ ಯಾವತ್ತೂ ಮಾತನಾಡುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ’ ಎಂದು ಎಲ್ಲ ಅಧಿಕಾರಿಗಳ ಮುಂದೆ ಅನಂತಮೂರ್ತಿ ಹೆಗಡೆ ಅವರಿಗೆ ಅವಮಾನ ಮಾಡಿದ್ದರು. `ನಿಮ್ಮಲ್ಲಿ ದಾಖಲೆ ಇದ್ದರೆ ಬಿಡುಗಡೆ ಮಾಡಿ’ ಎಂದು ಸಹ ಮಂಕಾಳು ವೈದ್ಯ ಸವಾಲು ಹಾಕಿದ್ದರು.
ಆ ಸವಾಲು ಸ್ವೀಕರಿಸದ ಅನಂತಮೂರ್ತಿ ಹೆಗಡೆ `2018-19 ಸಾಲಿನಿಂದ 22-23ಸಾಲಿನ ಬಿಜೆಪಿ ಸರಕಾರದ ಅವಧಿಯಲ್ಲಿ ಶಿರಸಿ ವಿಭಾಗಕ್ಕೆ 87 ಬಸ್ಸುಗಳು ಹೊಸದಾಗಿ ಖರೀದಿ ಆಗಿದೆ. ಅದರಲ್ಲಿ ಶಿರಸಿ ಘಟಕಕ್ಕೆ 28 ಹೊಸ ವಾಹನಗಳನ್ನು ಖರೀದಿ ಮಾಡಲಾಗಿದೆ’ ಎಂಬ ಅಂಶವನ್ನು ಬಹಿರಂಗಗೊಳಿಸಿದ್ದಾರೆ. ಶಿರಸಿಯ ಮಾರಿಕಾಂಬಾ ಜಾತ್ರಾ ಸಭೆಯಲ್ಲಿ ಸಚಿವರು ಸುಳ್ಳು ಹೇಳಿದ್ದಾರೆ’ ಎಂದು ಕಿಡಿಕಾರಿದ್ದಾರೆ. `ಸಚಿವರ ಕ್ಷೇತ್ರವಾದ ಮಂಕಿ ಚುನಾವಣೆಯಲ್ಲಿ ಮಂಕಾಳು ವೈದ್ಯ ಮುಖಭಂಗ ಅನುಭವಿಸಿದ್ದು, ಅದರ ಸಿಟ್ಟಿನಿಂದ ಬಿಜೆಪಿಗರನ್ನು ನಿಂದಿಸುತ್ತಿದ್ದಾರೆ. ಸುಳ್ಳು ಹೇಳುವುದು ಸಚಿವರಿಗೆ ಹೊಸದಲ್ಲ. ಬೇಡ್ತಿ ಸಮಾವೇಶದಲ್ಲಿ ಗುರುಗಳ ಎದುರಿಗೆ ಎಲ್ಲರೂ ಒಗ್ಗೂಡಿ ಈ ಯೋಜನೆಯನ್ನು ವಿರೋಧಿಸೋಣ ಎಂದಿದ್ದ ವೈದ್ಯರು ಮರುದಿನವೇ ರಾಜಕೀಯ ಮಾತನಾಡಿದ್ದು ಸಹ ಸ್ಮರಿಸಬೇಕು’ ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
`ಚುನಾವಣೆಯಲ್ಲಿ ಗೆದ್ದು ಬಂದರೆ ಕ್ಷೇತ್ರದ ಜನರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಟ್ಟಿಸುತ್ತೇನೆ ಎಂದ ಮಾತನ್ನು ಸಚಿವರು ಮರೆತಿದ್ದಾರೆ’ ಎಂದವರು ದೂರಿದ್ದಾರೆ. ಬಿಜೆಪಿ ಪ್ರಮುಖರಾದ ಶ್ರೀನಿವಾಸ ನಾಯ್ಕ, ಮಂಜುನಾಥ ನಾಯ್ಕ, ರಮೇಶ ನಾಯ್ಕ, ರಾಘವೇಂದ್ರ ನಾಯ್ಕ, ಗಣೇಶ ಹೆಗಡೆ ಇನ್ನಿತರರು ಸಹ ಮಂಕಾಳು ವೈದ್ಯರ ನಡೆ ವಿರೋಧಿಸಿದ್ದಾರೆ.