ಯಲ್ಲಾಪುರ ಜಾತ್ರೆ ಅಂಗವಾಗಿ ನಡೆಯುವ `ಹೊರ ಮಂಗಳವಾರ’ ಆಚರಣೆಗೆ ಮಕ್ಕಳ ಉದ್ಯಾನವನ ಸಿದ್ಧಗೊಂಡಿದೆ.
ಜನವರಿ 20, 27 ಹಾಗೂ ಫೆಬ್ರವರಿ 3ರಂದು `ಹೊರ ಮಂಗಳವಾರ’ ಆಚರಣೆ ನಡೆಯಲಿದ್ದು, ಜೋಡಕೆರೆ ಬಳಿಯಿರುವ ಉದ್ಯಾನವನವನ್ನು ಸ್ವಚ್ಚ ಮಾಡಲಾಗಿದೆ. ಉದ್ಯಾನವನಕ್ಕೆ ಬರುವವರ ಅನುಕೂಲಕ್ಕಾಗಿ ಅಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದೆ. ಗಿಡ-ಗಂಟಿಗಳನ್ನು ತೆರವು ಮಾಡಲಾಗಿದೆ. ಮುರಿದು ಬಿದ್ದಿದ್ದ ಕಪೌಂಡ್ ಸರಿಪಡಿಸಿ ಅದಕ್ಕೆ ಬಣ್ಣ ಬಡಿಯುವ ಕೆಲಸ ನಡೆದಿದೆ. ಎಲ್ಲೆಂದರಲ್ಲಿ ಬಿದ್ದಿದ್ದ ಕಸವನ್ನು ಆರಿಸಿ ಉದ್ಯಾನವನವನ್ನು ಸುಂದರವನ್ನಾಗಿಸಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ದೀಪಗಳನ್ನು ಅಳವಡಿಸಲಾಗಿದೆ.
ಮಂಜುನಾಥ ನಗರದ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸತೀಶ ನಾಯ್ಕ, ಪ ಪಂ ಆರೋಗ್ಯ ನಿರಿಕ್ಷಕ ಗುರು ಗಡಗಿ ಜೊತೆ ಮುಖ್ಯಾಧಿಕಾರಿ ಕುಮಾರ ನಾಯ್ಕ ಹಾಗೂ ಇಂಜಿನಿಯರ್ ಹೇಮಚಂದ್ರ ನಾಯ್ಕ ಉದ್ಯಾನವನ ವೀಕ್ಷಣೆ ಮಾಡಿದ್ದಾರೆ. 50ಕ್ಕೂ ಅಧಿಕ ಕಾರ್ಮಿಕರನ್ನು ಅಲ್ಲಿ ನಿಯೋಜಿಸಿ ನಾಲ್ಕು ದಿನಗಳ ಕೆಲಸ ಮಾಡಿಸಿದ್ದಾರೆ.
ಈ ಎಲ್ಲಾ ಹಿನ್ನಲೆ ಹೊರ ಮಂಗಳವಾರ ಆಚರಣೆಗೆ ಉದ್ಯಾನವನವೂ ಯೋಗ್ಯ ಪ್ರದೇಶವಾಗಿದ್ದು, ಜನ ಅದರ ಪ್ರಯೋಜನಪಡೆಯಬೇಕು. ವಿವಿಧ ಪ್ರವಾಸಿ ತಾಣಗಳಿಗೆ ಹೋಗುವುದರ ಜೊತೆ ಉದ್ಯಾನವನದ ವಾತಾವರಣವನ್ನು ಅನುಭವಿಸಬೇಕು ಎಂದು ಆ ಭಾಗದವರು ಮನವಿ ಮಾಡಿದ್ದಾರೆ.