ಕಾರವಾರದ ಶಿಕ್ಷಕಿ ಶಿಲ್ಪಾ ಮಾಳ್ಸೇಕರ್ ಅವರ ಮೊಬೈಲ್ ಹಾಗೂ ಬಂಗಾರ ಕಳ್ಳತನವಾಗಿದ್ದು, ಮೊಬೈಲ್ ಕದ್ದ ಅನೀಲ ಕಾಂಬಳೆ ಅದನ್ನು ಹಿಂತಿರುಗಿಸಿದ್ದಾರೆ. ಆದರೆ, ಬಂಗಾರದ ಒಡವೆಯನ್ನು ಮಾತ್ರ ಕೊಡಲು ಒಪ್ಪುತ್ತಿಲ್ಲ!
ಕಾರವಾರದ ದೋಬಿಘಾಟ್ ರಸ್ತೆಯ ರೋಹನ ಅಪಾರ್ಟಮೆಂಟಿನಲ್ಲಿ ಶಿಲ್ಪಾ ಸುರೇಶ ಮಾಳ್ಸೇಕರ್ ಅವರು ವಾಸವಾಗಿದ್ದಾರೆ. 2025ರ ನವೆಂಬರ್ 2ರಂದು ಅವರು ತುಳಸಿ ಹಬ್ಬದ ಅಂಗವಾಗಿ ಮಾರುಕಟ್ಟೆಗೆ ಹೋದಾಗ ತಮ್ಮ ಬ್ಯಾಗ್ ಕಳೆದುಕೊಂಡಿದ್ದರು. ಹಬ್ಬದ ಅಂಗವಾಗಿ ಹೂವು ಖರೀದಿಸಿ ಅವರು ಕೋಡಿಭಾಗ ಮಾರ್ಗ ಹೊರಟಿದ್ದು, ನಡುವೆ ಸ್ಕೂಟರ್ ನಿಲ್ಲಿಸಿದಾಗ ಸ್ಕೂಟರ್ ಮೇಲಿರಿಸಿದ್ದ ಬ್ಯಾಗನ್ನು ಕಳ್ಳರು ದೋಚಿದ್ದರು. ಹಾಲು ತರಲು ಹೋಗಿದ್ದ ಶಿಲ್ಪಾ ಅವರು ಮರಳಿ ಬಂದಾಗ ಬ್ಯಾಗ್ ಕಾಣಿಸಿರಲಿಲ್ಲ. ಆ ಬ್ಯಾಗಿನಲ್ಲಿ ಮೊಬೈಲ್ ಜೊತೆ 2.10 ಲಕ್ಷ ರೂ ಮೌಲ್ಯದ ಬಂಗಾರದ ಆಭರಣಗಳಿದ್ದು, ಮೊಬೈಲ್ ಕಾಣೆಯಾದ ಬಗ್ಗೆ ಅವರು ಆನ್‌ಲೈನ್ ಮೂಲಕ ದೂರು ನೀಡಿದ್ದರು.
ಅದಾದ ನಂತರ ಶಿಲ್ಪಾ ಅವರ ಮೊಬೈಲ್ ಅನೀಲ ಕಾಂಬಳೆ ಅವರ ಬಳಿಯಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಡಿಸೆಂಬರ್ 29ರಂದು ಅನೀಲ ಕಾಂಬಳೆ ಆ ಮೊಬೈಲನ್ನು ಮರಳಿಸಿದ್ದರು. ಆದರೆ, ಬಂಗಾರವನ್ನು ಮಾತ್ರ ಕೊಟ್ಟಿರಲಿಲ್ಲ. ಎಷ್ಟು ಬಾರಿ ಕೇಳಿದರೂ ಬಂಗಾರದ ಬಗ್ಗೆ ಅನೀಲ ಕಾಂಬಳೆ ಮಾತನಾಡುತ್ತಿರಲಿಲ್ಲ. ಹೀಗಾಗಿ ಅನೀಲ ಕಾಂಬಳೆ ಮೇಲೆ ಶಿಲ್ಪಾ ಮಾಳ್ಸೇಕರ್ ಅವರು ಅನುಮಾನವ್ಯಕ್ತಪಡಿಸಿ ದೂರು ನೀಡಿದ್ದು, `ಕಳ್ಳರು ಕದ್ದ ಬಂಗಾರವನ್ನು ಮರಳಿಸಿ’ ಎಂದು ಅವರು ಪೊಲೀಸರ ಮೊರೆ ಹೋಗಿದ್ದಾರೆ. ಕಾರವಾರ ನಗರಠಾಣೆಯವರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.