ಯಲ್ಲಾಪುರದ ಮಹಾಬಲೇಶ್ವರ ಭಟ್ಟ ಅವರಿಗೆ ಅಂಕೋಲಾದ ಕೃಷ್ಣ ಭಟ್ಟ ಅವರು ಕತ್ತಿ ಬೀಸಿದ್ದಾರೆ. ಮಹಾಬಲೇಶ್ವರ ಭಟ್ಟ ಹಾಗೂ ಕೃಷ್ಣ ಭಟ್ಟ ಅವರು ಅಣ್ಣ-ತಮ್ಮಂದಿರಾಗಿದ್ದು, ಜಮೀನಿನ ವಿಷಯವಾಗಿ ಕಾದಾಟ ನಡೆಸಿದ್ದಾರೆ.
ಯಲ್ಲಾಪುರದ ಚಂದ್ಗುಳಿಯಲ್ಲಿ ಮಹಾಬಲೇಶ್ವರ ವಿಶ್ವೇಶ್ವರ ಭಟ್ಟ ಅವರು ವೈದಿಕರಾಗಿದ್ದಾರೆ. ಅಂಕೋಲಾದ ಹೆಗ್ಗಾರಿನಲ್ಲಿಯೂ ಮಹಾಬಲೇಶ್ವರ ಭಟ್ಟ ಅವರಿಗೆ ಜಮೀನಿದ್ದು, ಆ ಜಮೀನಿಗೆ ಹೋಗಲು ಅವರ ತಮ್ಮ ಕೃಷ್ಣ ವಿಶ್ವೇಶ್ವರ ಭಟ್ಟ ಅವರು ಬಿಡುತ್ತಿಲ್ಲ. ಅಣ್ಣ-ತಮ್ಮರ ನಡುವೆ ಮೂಡಿದ ವೈಮನಸ್ಸು ಒಂದು ವರ್ಷದ ಈಚೆಗೆ ತಾರಕಕ್ಕೇರಿದ್ದು, ಅದೇ ಇದೀಗ ಕತ್ತಿ ಬೀಸುವಷ್ಟರ ಮಟ್ಟಿಗೆ ಮುಂದುವರೆದಿದೆ.
ಒoದು ವರ್ಷದಿಂದ ಜಮೀನಿನಲ್ಲಿ ಬೆಳೆ ತೆಗೆಯಲು ಸಾಧ್ಯವಾಗದ ಕಾರಣ 62 ವರ್ಷದ ಮಹಾಬಲೇಶ್ವರ ಭಟ್ಟ ಅವರು ನೊಂದಿದ್ದು, ಜನವರಿ 3ರಂದು ಅವರು ತೋಟ ಸುತ್ತಾಟಕ್ಕಾಗಿ ಹೆಗ್ಗಾರಿಗೆ ಹೋಗಿದ್ದರು. ತೋಟ ತಿರುಗಾಟದ ನಂತರ ಅವರು ಅಲ್ಲಿಯೇ ವಿಶ್ರಾಂತಿ ಪಡೆದರು. ಆ ವೇಳೆ ಅಲ್ಲಿ 52 ವರ್ಷದ ಅವರ ತಮ್ಮ ಕೃಷ್ಣ ಭಟ್ಟರು ಬಂದರು. ಕೈಯಲ್ಲಿ ಕತ್ತಿ ಹಿಡಿದು ಬಂದಿದ್ದ ಅವರು ಅಣ್ಣನ ಕುತ್ತಿಗೆಯ ಕಡೆ ಅದನ್ನು ಬೀಸಿದರು. ತಕ್ಷಣ ವಿಶ್ವೇಶ್ವರ ಭಟ್ಟರು ಕುತ್ತಿಗೆಗೆ ಅಡ್ಡಲಾಗಿ ಕೈ ಹಿಡಿದಿದ್ದು, ಆ ಕತ್ತಿ ಅವರ ಕೈಗೆ ತಾಗಿತು.
ಕೈಯಿಂದ ರಕ್ತ ಸುರಿದಿದ್ದು, ವಿಶ್ವೇಶ್ವರ ಭಟ್ಟ ಅವರು ನೆಲಕ್ಕೆ ಬಿದ್ದರು. ಆಗ, ಕೃಷ್ಣ ಭಟ್ಟರು ತಮ್ಮ ಕಾಲಿನಿಂದ ವಿಶ್ವೇಶ್ವರ ಭಟ್ಟರನ್ನು ತುಳಿದರು. `ಈ ಜಾಗಕ್ಕೆ ನೀ ಬರುವ ಹಾಗಿಲ್ಲ’ ಎಂದು ಕೃಷ್ಣ ಭಟ್ಟರು ತಾಕೀತು ಮಾಡಿದರು. `ನನ್ನ ಜಾಗಕ್ಕೆ ನಾನು ಬರುವೆ’ ಎಂದು ವಿಶ್ವೇಶ್ವರ ಭಟ್ಟರು ಇನ್ನಷ್ಟು ಗಟ್ಟಿಯಾಗಿ ಅಬ್ಬರಿಸಿದರು. ಹೀಗಾಗಿ ಕೃಷ್ಣ ಭಟ್ಟರ ಸಿಟ್ಟು ಮತ್ತೆ ಹೆಚ್ಚಾಗಿದ್ದು, ಇನ್ನಷ್ಟು ಥಳಿಸಿದರು. `ಮತ್ತೆ ಬಂದರೆ ಇದೇ ಕತ್ತಿಯಿಂದ ಕೊಚ್ಚಿ ಹಾಕುವೆ’ ಎಂದು ಕೃಷ್ಣ ಭಟ್ಟರು ಬೆದರಿಸಿದರು. ತಮ್ಮನಿಂದಲೇ ಪೆಟ್ಟು ತಿಂದ ವಿಶ್ವೇಶ್ವರ ಭಟ್ಟರು ತಮ್ಮ ಮೇಲಿನ ದಾಳಿಯ ಬಗ್ಗೆ ಅಳಲು ತೋಡಿಕೊಂಡರು. ನ್ಯಾಯ ಕೊಡಿಸಿ ಎಂದು ಪೊಲೀಸರ ಮೊರೆ ಹೋದರು.