ಶಿರಸಿ ಸರಗುಪ್ಪಾದಲ್ಲಿ ಕೊಟ್ಟಿಗೆಗೆ ನುಗ್ಗಿ ಅಲ್ಲಿದ್ದ ದನಗಳನ್ನು ಕದ್ದಿದ್ದ ಕಳ್ಳರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅವರೆಲ್ಲರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಶಿರಸಿ ಬಳಗೇರಿಯ ಸಿರಗುಪ್ಪಾದ ರಾಮಚಂದ್ರ ಗೌಡ ಹಾಗೂ ಅವರ ಸಹೋದರರು ಸಾಕಿದ್ದ ಜಾನುವರುಗಳನ್ನು ಕಳ್ಳರು ಅಪಹರಿಸಿದ್ದರು. ಹೊಲದಲ್ಲಿದ್ದ ಜಾನುವಾರುಗಳ ಜೊತೆ ಕೊಟ್ಟಿಗೆಯಲ್ಲಿದ್ದ ದನಗಳನ್ನು ಕಳ್ಳರು ಕದ್ದೊಯ್ದಿದ್ದರು. ನಾಲ್ಕು ಎತ್ತು ಹಾಗೂ ಮೂರು ಹೋರಿ ಕಳ್ಳತನವಾದ ಬಗ್ಗೆ ಕುಟುಂಬದವರು ಪೊಲೀಸರಲ್ಲಿ ಅಳಲು ತೋಡಿಕೊಂಡಿದ್ದರು.
ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಕಳ್ಳರ ಹುಡುಕಾಟಕ್ಕೆ ಮೂರು ತಂಡ ರಚಿಸಿದ್ದರು. ಅವರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಿರೂರು ಗೊಲ್ಲರ ಬಿಡಾರದ ಮೋಹನ ಶೇಖಪ್ಪ ಗೊಲ್ಲರ (22), ಬಸವರಾಜ ಅಮ್ಮಣ್ಣಪ್ಪ ಗೊಲ್ಲರ(39), ಅವಿನಾಶ ರುದ್ದಪ್ಪ ಗೊಲ್ಲರ್ (22), ಸುರೇಶ್ ಪಕೀರಪ್ಪ ಗೊಲ್ಲರ (38) ಬಸವರಾಜ ಪಕೀರಪ್ಪ ಗೊಲ್ಲರ (47) ಹಾಗೂ ಹಾನಗಲ್ ತಾಲೂಕ ಅಕ್ಕಿಆಲೂರಿನ ಅಯೂಬ್ ಅನೀಮ್ ಸಾಬ್ (54) ಅವರು ಸಿಕ್ಕಿಬಿದ್ದರು. ಅವರೇ ಜಾನುವಾರು ಕಳ್ಳತನ ಮಾಡಿರುವುದು ಸಹ ತನಿಖೆಯಿಂದ ದೃಢವಾಯಿತು.
ಗುರುವಾರ ಆ ಎಲ್ಲರನ್ನು ಪೊಲೀಸರು ವಶಕ್ಕೆಪಡೆದರು. ಜೊತೆಗೆ ಕಳ್ಳತನಕ್ಕೆ ಬಳಸಿದ್ದ ಮಹೇಂದ್ರ ಪಿಕಪ್ ಹಾಗೂ ಬೈಕನ್ನು ಜಪ್ತು ಮಾಡಿದರು. ಶಿರಸಿ ಗ್ರಾಮೀಣ ಠಾಣೆ ಪೊಲೀಸ್ ನಿರೀಕ್ಷಕ ರಮೇಶ ಎಂ ಹೂಗಾರ ಕಾರ್ಯಾಚರಣೆ ಮುಂದಾಳತ್ವವಹಿಸಿದ್ದು, ಪಿಸೈ ಸಂತೋಷ್ ಕುಮಾರ್, ಅಶೋಕ ರಾಥೋಡ್ ಮತ್ತು ಎ ಎಸ್ ಐ ಸಂತೋಷ ಕಮಟಗೇರಿ, ಪ್ರದೀಪ ಎಂ ರೇವಣಕರ ಕಳ್ಳರನ್ನು ಹಿಡಿಯುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು.