ಶಿರಸಿಯ ಕಾಶೀಂ ಸಾಬ್ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಮನೆಯಲ್ಲಿದ್ದ ಹಣ ಹಾಗೂ ಒಡವೆ ದೋಚಿ ಅವರು ಪರಾರಿಯಾಗಿದ್ದಾರೆ.
ಶಿರಸಿಯ ಹುಬ್ಬಳ್ಳಿ ರಸ್ತೆಯ ಬಸವೇಶ್ವರ ನಗರದಲ್ಲಿ ಕಾಶೀಂ ಅಬ್ದುಲ್ ಮಹಾಬ್ ಶೇಖ್ ಅವರು ವಾಸವಾಗಿದ್ದಾರೆ. 70 ವರ್ಷದ ಅವರ ಮನೆ ಮೇಲೆ ಕಳ್ಳರು ಕಣ್ಣು ಹಾಕಿದ್ದಾರೆ. ಜನವರಿ 22ರಿಂದ 26ರ ಅವಧಿಯಲ್ಲಿ ಕಾಶೀಂ ಸಾಬ್ ಅವರು ಮನೆಯಲ್ಲಿ ಇಲ್ಲದ ವಿಷಯ ಅರಿತು ಕಳ್ಳರು ಮನೆಗೆ ಬಂದಿದ್ದಾರೆ. ಮನೆ ಬಾಗಿಲು ಹಾಕಿದ ಕಾರಣ ಬಾತ್ ರೂಂ ಮೂಲಕ ಕಳ್ಳರು ಒಳಗೆ ಪ್ರವೇಶಿಸಿದ್ದಾರೆ.
ಬಾತ್ ರೂಮಿನ ಹಂಚು ತೆಗೆದ ಕಳ್ಳರು ಅಲ್ಲಿಂದ ಒಳಗೆ ಆಗಮಿಸಿದ್ದು, ನೇರವಾಗಿ ಕೋಣೆಗೆ ಹೋಗಿದ್ದಾರೆ. ಅಲ್ಲಿದ್ದ ಟ್ರಿಜೋರಿಗೆ ಕಾಶೀಂ ಸಾಬ್ ಅವರು ಬೀಗ ಹಾಕದ ಕಾರಣ ಕಳ್ಳರಿಗೆ ಅನುಕೂಲವಾಗಿದೆ. ಕಪಾಟಿನಲ್ಲಿದ್ದ 1.20 ಲಕ್ಷ ರೂ ಹಣ ಕದ್ದ ಕಳ್ಳರು ಅಲ್ಲಿಯೇ ಇದ್ದ 10 ಗ್ರಾಂ ಚಿನ್ನದ ಸರವನ್ನು ಸಹ ಜೇಬಿಗಿಳಿಸಿಕೊಂಡಿದ್ದಾರೆ.
ಜನವರಿ 27ರಂದು ಮನೆಗೆ ಬಂದ ಕಾಶೀಂ ಸಾಬ್ ಅವರಿಗೆ ಮನೆಯೊಳಗಿನ ಸಾಮಗ್ರಿ ಚಲ್ಲಾಪಿಲ್ಲಿಯಾಗಿರುವುದು ಕಾಣಿಸಿದೆ. ಆ ನಂತರ ಬಾತ್ ರೂಮಿನ ಹಂಚು ಹಾರಿರುವುದು ಗೋಚರವಾಗಿದೆ. ಮನೆ ಪೂರ್ತಿ ಹುಡುಕಾಟ ನಡೆಸಿದಾಗ 1.20 ಲಕ್ಷ ರೂ ಹಣ ಹಾಗೂ 60 ಸಾವಿರ ರೂ ಮೌಲ್ಯದ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ಹೋದ ಕಾಶೀಂ ಸಾಬ್ ಅವರು ಕಳ್ಳರ ವಿರುದ್ಧ ಕಿಡಿಕಾರಿದ್ದಾರೆ.
ಆ ಕಳ್ಳನನ್ನು ಹುಡುಕಿ ತಮ್ಮ ಹಣ-ಆಭರಣ ಮರಳಿಸಿ ಎಂದವರು ಮನವಿ ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳ್ಳನನ್ನು ಹುಡುಕುವುದಾಗಿ ಪೊಲೀಸರು ಹೇಳಿದ್ದಾರೆ.