ಅಂಕೋಲಾದ ಸುಂಕಸಾಳದಲ್ಲಿರುವ ಬ್ಯಾಂಕ್ ಆಫ್ ಬರೋಡಾಗೆ ಕಳ್ಳರು ನುಗ್ಗಿದ್ದಾರೆ. ಬ್ಯಾಂಕಿನ ಶೌಚಾಲಯದ ಪಕ್ಕ ಮತ್ತೊಂದು ಬಾಗಿಲು ಕೊರೆದು ಕಳ್ಳರು ದರೋಡೆಗೆ ಪ್ರಯತ್ನಿಸಿದ್ದಾರೆ.
ಶನಿವಾರ ಬ್ಯಾಂಕ್ ಸಿಬ್ಬಂದಿ ಕೆಲಸ ಮುಗಿಸಿ ಮನೆಗೆ ಮರಳಿದ್ದರು. ಭಾನುವಾರ ರಜೆ ಮುಗಿಸಿ ಸೋಮವಾರ ಬ್ಯಾಂಕ್ ಪ್ರವೇಶಿಸಿದಾಗ ಕಳ್ಳತನಕ್ಕೆ ಕೈ ಹಾಕಿರುವುದು ಕಾಣಿಸಿದೆ. ಬ್ಯಾಂಕಿಗೆ ನುಗ್ಗಿದ್ದ ಕಳ್ಳರಿಗೆ ಏನೂ ಸಿಕ್ಕಿಲ್ಲ. ಭದ್ರ ಲಾಕರ್ ಇದ್ದ ಗೋಡೆಯನ್ನು ಅರ್ದ ಕೊರೆದ ನಂತರ ಅವರು ಅಲ್ಲಿಂದ ಪರಾರಿಯಾಗಿದ್ದಾರೆ. ಹೆದ್ದಾರಿ ಪಕ್ಕದಲ್ಲಿಯೇ ಬ್ಯಾಂಕ್ ಇದ್ದು, ಜನ ಬರುವುದನ್ನು ನೋಡಿ ಕಳ್ಳರು ಓಡಿರುವ ಅನುಮಾನವ್ಯಕ್ತವಾಗಿದೆ.
ದರೋಡೆಕೋರರು ಬ್ಯಾಂಕಿನ ಶೌಚಾಲಯದ ಗೋಡೆ ಕೆಳಭಾಗದಲ್ಲಿ ಮತ್ತೊಂದು ದ್ವಾರ ಸೃಷ್ಟಿಸಿದ್ದಾರೆ. ಅದರ ಮೂಲಕವೇ ಬ್ಯಾಂಕ್ ಒಳಗೆ ಪ್ರವೇಶಿಸಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಬ್ಯಾಂಕ್ ಒಳ ಆವರಣದಲ್ಲಿ ಏನೂ ಸಿಗದ ಕಾರಣ ಲಾಕರ್ ಕಡೆ ಹೋಗಿದ್ದಾರೆ. ಬ್ಯಾಂಕ್ ಶೌಚಾಲಯ ಒಡೆದ ಮಾದರಿಯಲ್ಲಿಯೇ ಹಿಂದಿನಿAದ ಲಾಕರ್ ಒಡೆಯುವ ಪ್ರಯತ್ನವನ್ನು ಮಾಡಿದ್ದು, ಕಳ್ಳರ ಪಾಲಿಗೆ ಅದು ಫಲ ಕೊಡಲಿಲ್ಲ.
ಬ್ಯಾಂಕಿನಲ್ಲಿ ಕಳ್ಳತನ ಪ್ರಯತ್ನ ನಡೆದ ಬಗ್ಗೆ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಉತ್ತರ ಕನ್ನಡ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಮತ್ತು ಡಿವಾಯ್‌ಎಸ್ಪಿ ಗಿರೀಶ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಂಕೋಲಾ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್‌ಐ ಗುರುನಾಥ ಹಾದಿಮನೆ, ವಿಶ್ವನಾಥ ಹಾಗೂ ಸುಂಕಸಾಳ ಹೊರಠಾಣೆಯ ಸಂತೋಷ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಶ್ವಾನದಳ, ಬೆರಳಚ್ಚು ತಜ್ಞರು ಸಹ ಸ್ಥಳ ಭೇಟಿ ಮಾಡಿದ್ದಾರೆ. ಪೊಲೀಸರು ಸುತ್ತಲು ಇರುವ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಆರಂಭಿಸಲಾಗಿದೆ. ಶೀಘ್ರದಲ್ಲಿಯೇ ದರೋಡೆಕೋರರ ಹೆಡೆಮುರಿ ಕಟ್ಟುವುದಾಗಿ ಪೊಲೀಸರು ವಿಶ್ವಾಸವ್ಯಕ್ತಪಡಿಸಿದ್ದಾರೆ.