ಯಲ್ಲಾಪುರದಲ್ಲಿ 18-19ನೇ ವಯಸ್ಸಿನ ಯುವಕರಿಬ್ಬರು ಅಡ್ಡದಾರಿ ಹಿಡಿದಿದ್ದಾರೆ. ವಿದ್ಯೆ, ದುಡಿಮೆ ಮಾಡಬೇಕಾದ ವಯಸ್ಸಿನಲ್ಲಿ ಅವರಿಬ್ಬರು ಮಾದಕ ವ್ಯಸನಕ್ಕೆ ದಾಸರಾಗಿದ್ದಾರೆ.
ಯಲ್ಲಾಪುರದ ಉದ್ಯಮ ನಗರದಲ್ಲಿ ಮೆಕ್ಯಾನಿಕ್ ಆಗಿರುವ ಸುಜಲ ರಘುನಾಥ ಆಚಾರಿ (19) ಹಾಗೂ ಅದೇ ಊರಿನಲ್ಲಿ ಪೇಟಿಂಗ್ ಕೆಲಸ ಮಾಡುವ ಸುದೀಪ ಶ್ರೀಕಾಂತ ಕಲ್ಬುರ್ಗಿ (18) ಮಾದಕ ವ್ಯಸನದ ಮೋಹಕ್ಕೆ ಒಳಗಾಗಿದ್ದಾರೆ. ಜನವರಿ 30ರಂದು ಅವರಿಬ್ಬರು ಕದ್ದು ಮುಚ್ಚಿ ಗಾಂಜಾ ಸೇದುವಾಗ ಸಿಕ್ಕಿ ಬಿದ್ದಿದ್ದಾರೆ.
ಜನವರಿ 30ರ ಬೆಳಗ್ಗೆಯೇ ಸುಜಲ ಆಚಾರಿ ಅವರು ಬಿಸಗೋಡು ಕ್ರಾಸಿನ ಬಳಿ ಹೋಗಿದ್ದರು. ಸಾತೊಡ್ಡಿ ಜಲಪಾತಕ್ಕೆ ಹೋಗುವ ರಸ್ತೆ ಅಂಚಿನಲ್ಲಿ ನಿಂತು ಹೊಗೆ ಬಿಡುತ್ತಿದ್ದರು. ಪಿಸೈ ಶೇಡ್ ಜಿ ಚೌಹಾಣ್ ಅವರು ಸುಜಲ ಆಚಾರಿ ಅವರನ್ನು ಮಾತನಾಡಿಸಿದರು. ಆದರೆ, ಅಮಲಿನಲ್ಲಿದ್ದ ಸುಜಲ ಆಚಾರಿ ಮಾತು ತೊದಲಿದ್ದು, ಅವರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು.
ಸುದೀಪ ಕಲ್ಬುರ್ಗಿ ಅವರು ಶಿರಸಿ ಎಪಿಎಂಸಿ ಬಳಿಯ ಉದ್ಯಾನವನದಲ್ಲಿ ಅಲೆದಾಡುತ್ತಿದ್ದರು. ಮಧ್ಯಾಹ್ನದ ವೇಳೆಗೆ ಉದ್ಯಾನವನದ ಹೊರಭಾಗ ಸುದೀಪ ಕಲ್ಬುರ್ಗಿ ಅಮಲಿನಲ್ಲಿರುವುದನ್ನು ಪಿಐ ರಮೇಶ ಹಾನಾಪುರ ಅವರು ಗಮನಿಸಿದರು. ಸುದೀಪ ಕಲ್ಬುರ್ಗಿ ಅವರನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಸೇದಿರುವುದು ದೃಢವಾಯಿತು. ಸುಜಲ ಆಚಾರಿ ಅವರ ವೈದ್ಯಕೀಯ ವರದಿಯೂ ಗಾಂಜಾ ಸೇವನೆಯನ್ನು ದೃಢಪಡಿಸಿತು.
ಈ ಹಿನ್ನಲೆ ಪೊಲೀಸರು ಅವರಿಬ್ಬರಿಗೂ ಮಾದಕ ವ್ಯಸನದ ದುಷ್ಪರಿಣಾಮಗಳನ್ನು ವಿವರಿಸಿದರು. ಸಾಕಷ್ಟು ಜಾಗೃತಿ ಮೂಡಿಸಿದರೂ ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸಿದ ಕಾರಣ ಪ್ರಕರಣವನ್ನು ದಾಖಲಿಸಿದರು.
`ಮಾದಕ ವ್ಯಸನ ಜೀವನಕ್ಕೆ ಮಾರಕ’