ಕಾರವಾರದ ರೀಶಲ್ ಡಿಸೋಜಾ ಆತ್ಮಹತ್ಯೆ ಹಾಗೂ ಚಿರಾಗ ಕೋಠಾರಕರ್ ಪರಾರಿ ಪ್ರಕರಣ ವಿಷಯವಾಗಿ ಸುಳ್ಳು ಸುದ್ದಿ ಹರಡಿದ ವ್ಯಕ್ತಿ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಪೊಲೀಸ್ ಅಧೀಕ್ಷಕರ ಹೆಸರು ಬಳಸಿ ಸುಳ್ಳು ಸುದ್ದಿ ಹರಡಿದ ಮೊಬೈಲ್ ಸಂಖ್ಯೆ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದವನ ಶೋಧ ನಡೆದಿದೆ.
`ರೀಶಲ್ ಸಾವಿನ ನಂತರ ಹುಬ್ಬಳ್ಳಿಯ ವೈದ್ಯರು ಎರಡನೇ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಮಹತ್ವದ ಸುಳಿವು ಲಭ್ಯವಾಗಿದೆ’ ಎಂದು ವಾಟ್ಸಪ್ ಮೂಲಕ ವಿಷಯ ಹರಿದಾಡಿತ್ತು. `ಈ ಪ್ರಕರಣದಲ್ಲಿ ಪೊಲೀಸ್ ಅಧೀಕ್ಷಕರು ಪ್ರೆಸ್ ಮೀಟ್ ಮಾಡಿದ್ದಾರೆ’ ಎಂದು ಅದರಲ್ಲಿ ನಮೂದಿಸಲಾಗಿತ್ತು. ಜೊತೆಗೆ `ಚಿರಾಗ ಕೋಠಾರಕರ್ ಬಂಧನ ಆಗಿದ್ದು, ಅವರು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದಾರೆ’ ಎಂದು ವಾಟ್ಸಪ್ ಸಂದೇಶ ಹರಿದಾಡಿತ್ತು. ಆದರೆ, ಈ ಯಾವ ವಿಷಯದಲ್ಲಿಯೂ ಸತ್ಯಾಂಶವಿರಲಿಲ್ಲ.
ಅದಾಗಿಯೂ, ಈ ತಪ್ಪು ಮಾಹಿತಿ ಎರಡು ವಾಟ್ಸಪ್ ಗುಂಪುಗಳಲ್ಲಿ ಹರಿದಾಡಿದ್ದು, ಕದ್ರಾದ ಪೊಲೀಸ್ ಸಿಬ್ಬಂದಿ ಮಹೇಶ ಸಾವಸಂಗಿ ಅವರು ಅದನ್ನು ನೋಡಿದ್ದರು. ಜನವರಿ 18ರಂದು ಪೊಲೀಸ್ ಅಧೀಕ್ಷಕರು ಸುದ್ದಿಗೋಷ್ಠಿ ನಡೆಸಿದ ಬಗ್ಗೆ ಹಾಗೂ ರೀಶಲ್ ಡಿಸೋಜಾ ಮೊಬೈಲಿನಿಂದ ಸೈಬರ್ ಅಪರಾಧ ತಡೆ ಪೊಲೀಸರು ಕೆಲ ವೈಸ್ ನೋಟ್ ರಿಕವರಿ ಮಾಡಿದ ಬಗ್ಗೆಯೂ ಸಂದೇಶ ಹರಿದಾಡಿತ್ತು. ಈ ಎಲ್ಲಾ ವಿಷಯ ಸುಳ್ಳು ಎಂದು ಅರಿತ ಮಹೇಶ ಸಾವಸಂಗಿ ಅವರು ಸುಳ್ಳು ಸುದ್ದಿ ಹರಡಿದವರ ವಿರುದ್ಧ ದೂರು ನೀಡಿದರು.
ಸಾರ್ವಜನಿಕರಲ್ಲಿ ಗೊಂದಲ ಸೃಷ್ಠಿಸಿದ ಕಾರಣ ಆ ಸಂದೇಶ ಹರಿಬಿಟ್ಟ ಫೋನ್ ಸಂಖ್ಯೆ ನೀಡಿ ಅವರು ಪ್ರಕರಣ ದಾಖಲಿಸಿದ್ದು, ಪೊಲೀಸರು ಸುಳ್ಳು ಹೇಳಿದವನ ಹುಡುಕಾಟ ಶುರು ಮಾಡಿದ್ದಾರೆ.