ಅಂಕೋಲಾದ ಮಂಜುನಾಥ ನಾಯ್ಕ ಅವರ ಮನೆ ಬಳಿ ತೆಂಗಿನ ಮರ ಏರಿದ್ದ ರಾಜು ಗೌಡ ಅವರಿಗೆ ವಿದ್ಯುತ್ ತಂತಿ ತಗುಲಿದೆ. ಪರಿಣಾಮ ಅವರು ಮರದಿಂದ ಬಿದ್ದು ಸಾವನಪ್ಪಿದ್ದಾರೆ.
ಅಂಕೋಲಾದ ಹೊಸಗದ್ದೆಯಲ್ಲಿ ರಾಜು ಖೇಮು ಗೌಡ (32) ಅವರು ಸೆಂಟ್ರಿAಗ್ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಬಿಡುವಿನ ವೇಳೆ ಅವರು ತೆಂಗಿನ ಕಾಯಿ ಕೊಯ್ಯುವ ಕೆಲಸಕ್ಕೂ ಹೋಗುತ್ತಿದ್ದರು. ಜನವರಿ 12ರಂದು ಅವರು ಹೊಸಗದ್ದೆ ಗ್ರಾಮದಲ್ಲಿರುವ ಮಂಜುನಾಥ ಮಾದೇವ ನಾಯ್ಕ ಅವರ ಮನೆ ಬಳಿ ಹೋಗಿದ್ದರು. ಅಲ್ಲಿದ್ದ ತೆಂಗಿನ ಮರ ಏರಿ ಕಾಯಿ ಕೊಯ್ದಿದ್ದ ರಾಜು ಗೌಡ ಅವರು ತೆಂಗಿನ ಗರಿಗಳನ್ನು ಸ್ವಚ್ಛ ಮಾಡುತ್ತಿದ್ದರು. ಈ ವೇಳೆ ಆ ತೆಂಗಿನ ಹೆಡೆಗೆ ವಿದ್ಯುತ್ ತಂತಿ ತಗುಲಿತು. ಹಸಿ ಹೆಡೆಯ ಮೂಲಕ ಆ ವಿದ್ಯುತ್ ರಾಜು ಗೌಡ ಅವರನ್ನು ಸ್ಪರ್ಶಿಸಿತು.
ಗಟ್ಟಿಯಾಗಿ ಮರ ಹಿಡಿದುಕೊಂಡಿದ್ದ ರಾಜು ಗೌಡ ಅವರು ವಿದ್ಯುತ್ ಆಘಾತಕ್ಕೆ ಕೈ ಸಡಿಲಗೊಳಿಸಿದರು. ಕೆಳಗಿದ್ದ ಹೂವಿನ ಗಿಡಗಳ ಮೇಲೆ ಅವರು ಬಿದ್ದು ಪೆಟ್ಟು ಮಾಡಿಕೊಂಡರು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ರಾಜು ಗೌಡ ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರೊಳಗೆ ರಾಜು ಗೌಡ ಅವರು ಕೊನೆಯುಸಿರೆಳೆದಿದ್ದರು. ಅಂಕೋಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ಪೊಲೀಸ್ ಸಿಬ್ಬಂದಿ ಸುಧಾಕರ ನಾಯ್ಕ ಅವರಿಗೆ ರಾಜು ಗೌಡ ಅವರ ಸಹೋದರ ಸಂದೀಪ ಗೌಡ ಅವರು ಈ ವಿಷಯ ವಿವರಿಸಿದರು. ಸುಧಾಕರ ನಾಯ್ಕ ಅವರು ಪಿಸೈ ಗುರುನಾಥ ಹಾದಿಮನಿ ಅವರಿಗೆ ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.