ಕಾರವಾರದ ಸರ್ವೋದಯ ನಗರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಕೆ ಎಚ್ ಬಿ ಕಾಲೋನಿಯ ಜೊಮೆಟೋ ಡಿಲೆವರಿ ಬಾಯ್ ಹೃದಯ ಮಡ್ಲೇರಿ ಅವರು ಈ ಹೊಡೆದಾಟದಲ್ಲಿ ಪೆಟ್ಟು ತಿಂದಿದ್ದು, ಪ್ರತಿಯಾಗಿ ಅವರು ಸಹ ಮೂವರ ಮೇಲೆ ಆಕ್ರಮಣ ಮಾಡಿದ್ದಾರೆ.
ಎರಡು ವರ್ಷದ ಹಿಂದೆ ಕಾರವಾರ ಬಸ್ ನಿಲ್ದಾಣದ ಬಳಿ ಹೃದಯ ಮಲ್ಲೇಶ ಮೇಡ್ಲರಿ ಹಾಗೂ ಪುನೀತ ಅಂಬಿಗ ಅವರ ನಡುವೆ ಜಟಾಪಟಿ ನಡೆದಿತ್ತು. ಅದೇ ದ್ವೇಷದ ಮುಂದುವರೆದ ಭಾಗವಾಗಿ ಜನವರಿ 4ರಂದು ಸರ್ವೋದಯ ನಗರದ ಆಕಾಶ ಅವರ ಮನೆ ಮುಂದೆ ಮಾರಾಮಾರಿ ನಡೆದಿದೆ. ಸರ್ವೋದಯ ನಗರದಲ್ಲಿರುವ ಆಕಾಶ ಅವರ ಮನೆಗೆ ಊಟಕ್ಕೆ ಹೋಗಿದ್ದ ಹೃದಯ ಮಡ್ಲೇರಿ ಅವರಿಗೆ ನಾಲ್ವರು ಹಿಡಿದು ಥಳಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಹೃದಯ ಮಡ್ಲೇರಿ ಕಡೆಯವರು ಸಹ ಮೂವರನ್ನು ಹಿಡಿದು ಹೊಡೆದಿದ್ದಾರೆ.
ಹೃದಯ ಮಡ್ಲೇರಿ ಅವರ ದೂರಿನ ಪ್ರಕಾರ, ಕೊಂಕಣ ಖಾರ್ವಿವಾಡದ ಅಮೀನ ನರಸಿಂಹ ಕುಡ್ತಿಳಕರ್, ತರುಣ ಭಾನಾವಳಿಕರ್, ಗುರುಪ್ರಸಾದ ಸುರಂಗೇಕರ್ ಹಾಗೂ ಸನೀದ ಭಾನಾವಳಿಕರ್ ಸೇರಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಮೀನ ಕುಡ್ತಳ್ಳಿಕರ್ ಅವರ ದೂರಿನ ಪ್ರಕಾರ, ಕೆ ಎಚ್ ಬಿ ಕಾಲೋನಿಯ ಹೃದಯ ಮಡ್ಲೇರಿ, ಕಳಸವಾಡದ ಸೂರ್ಯಕಾಂತ ಕಳಸ್, ಮಾರಿಯಾ ನಗರದ ರಜತ ಗಣೇಶ ಆಚಾರಿ ಸೇರಿ ಅಮೀನ ಕುಡ್ತಳ್ಳಿಕರ್ ಅವರ ಮೇಲೆ ದಾಳಿ ಮಾಡಿದ್ದಾರೆ. ಈ ಎರಡು ಗುಂಪಿನವರು ಚಾಕು-ಚೂರಿ ಹಿಡಿದು ಹೊಡೆದಾಡಿಕೊಂಡಿದ್ದು, ಗಾಯಗೊಂಡವರು ಆಸ್ಪತ್ರೆ ಸೇರಿದ್ದಾರೆ.
ಈ ಎರಡೂ ಕಡೆಯವರು ಕಾರವಾರ ನಗರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.