ಕುಮಟಾದ ಬಗ್ಗೋಣ ಬಳಿಯ ಉದಯ ಪಂಡೀತ ಅವರ ಬೆಟ್ಟಕ್ಕೆ ಹೋಗಿದ್ದ ಮಂಜು ಮುಕ್ರಿ ಅವರು ಅಲ್ಲಿಯೇ ಶವವಾಗಿದ್ದಾರೆ.
ಕುಮಟಾ ಬಗ್ಗೋಣ ಇಪ್ಪಡಿಯಲ್ಲಿ ಮಂಜು ನಾರಾಯಣ ಮುಕ್ರಿ ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದರು. ಎಂಟು ವರ್ಷಗಳ ಹಿಂದೆ ಅವರಿಗೆ ಹೃದಯದ ರೋಗ ಕಾಣಿಸಿಕೊಂಡಿತು. ಎಂಟು ತಿಂಗಳ ಹಿಂದೆ ಆ ರೋಗ ಉಲ್ಬಣಿಸಿದ್ದು, ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆಪಡೆದಿದ್ದರು.
ಆ ವೇಳೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಗೊತ್ತಾಯಿತು. ಜೊತೆಗೆ ಕಿಡ್ನಿಯಲ್ಲಿಯೂ ಸಮಸ್ಯೆ ಕಾಣಿಸಿಕೊಂಡಿತು. ಅದಕ್ಕೆ ಅಲ್ಲಿನ ವೈದ್ಯರು ಔಷಧಿ ನೀಡಿದ್ದು, ಅದನ್ನುಪಡೆದ ಮಂಜು ಮುಕ್ರಿ ಅವರು ಮನೆಗೆ ಮರಳಿದ್ದರು. ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ಸಮಸ್ಯೆ ತೀವೃವಾದ ನಂತರ ಮಂಜು ಮುಕ್ರಿ ಅವರು ಮಾತನಾಡಲು ಸಮಸ್ಯೆ ಅನುಭವಿಸಿದರು.
ಅನಾರೋಗ್ಯದ ಕಾರಣ ಮಾನಸಿಕವಾಗಿಯೂ ಕುಗ್ಗಿದ್ದ ಅವರು ಫೆಬ್ರವರಿ 2ರಂದು ಆತ್ಮಹತ್ಯೆಯ ನಿರ್ಧಾರ ಮಾಡಿದರು. ಬಗ್ಗೋಣದ ಉದಯ ಪಂಡೀತ ಅವರ ಬೆಟ್ಟಕ್ಕೆ ಹೋಗಿ ಅಲ್ಲಿ ಮಂಜು ಮುಕ್ರಿ ಅವರು ನೇಣಿಗೆ ಶರಣಾದರು. ಮಂಜು ಮುಕ್ರಿ ಅವರ ತಂಗಿ ಸುಧಾ ರಾಜು ಮುಕ್ರಿ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದರು.