ಸಿದ್ದಾಪುರದ ಹಸವಂತೆ ಬಳಿ ವಾಸವಾಗಿರುವ ಗಂಗಾ ನಾಯ್ಕ ಅವರು ಅದೇ ಊರಿನ ಅಶೋಕ ನಾಯ್ಕ ಅವರನ್ನು ಮದುವೆ ಆಗಿದ್ದು, ಅಶೋಕ ನಾಯ್ಕ ಅವರ ಕಾಟ ಸಹಿಸಲಾಗದೇ ವಿಚ್ಚೇದನಪಡೆದಿದ್ದಾರೆ. ಅದಾಗಿಯೂ, ಅವರಿಗೆ ನೆಮ್ಮದಿಯಿಂದ ಬದುಕಲು ಅಶೋಕ ನಾಯ್ಕ ಅವರು ಬಿಡುತ್ತಿಲ್ಲ!
ಸಿದ್ದಾಪುರದ ನೆಜ್ಜೂರು ಸಮೀಪದ ಹಸವಂತೆಯಲ್ಲಿ ಗಂಗಾ ಗಣಪತಿ ನಾಯ್ಕ (28) ಅವರು ವಾಸವಾಗಿದ್ದಾರೆ. ಸದ್ಯ ಅವರು ಬ್ಯುಟಿಷಿಯನ್ ಆಗಿ ಬದುಕು ಕಟ್ಟಿಕೊಂಡಿದ್ದಾರೆ. ಗಂಗಾ ನಾಯ್ಕ ಅವರು ಅದೇ ಊರಿನ ಅಶೋಕ ಅಣ್ಣಪ್ಪ ನಾಯ್ಕ ಅವರನ್ನು ವಿವಾಹವಾಗಿದ್ದು, ಸಂಸಾರದಲ್ಲಿ ವೈಮನಸ್ಸು ಬಂದ ಕಾರಣ ಅವರಿಂದ ದೂರವಾಗಿದ್ದಾರೆ. 2022ರಲ್ಲಿಯೇ ಅವರಿಬ್ಬರ ವಿಚ್ಚೇದನ ನಡೆದ್ದರೂ ಅಶೋಕ ನಾಯ್ಕ ಅವರು ಗಂಗಾ ನಾಯ್ಕ ಅವರನ್ನು ಕಾಡಿಸುವುದನ್ನು ಬಿಟ್ಟಿಲ್ಲ. ಗಂಗಾ ನಾಯ್ಕ ಅವರ ಮೇಲೆ ಎರಡು ಬಾರಿ ಹಲ್ಲೆ ನಡೆಸಿದ್ದ ಅಶೋಕ ನಾಯ್ಕ ಅವರು ಇದೀಗ ಅವರ ಕೊಲೆ ಪ್ರಯತ್ನವನ್ನು ಮಾಡಿದ್ದಾರೆ. ಕತ್ತಿ ಬೀಸಿದಾಗ ಗಂಗಾ ನಾಯ್ಕ ಅವರು ತಪ್ಪಿಸಿಕೊಂಡಿದ್ದು, ಆ ಕತ್ತಿ ಗಂಗಾ ನಾಯ್ಕ ಅವರ ತಂದೆ ಗಣಪತಿ ನಾಯ್ಕ ಅವರ ಕೈಗೆ ತಾಗಿದೆ.
ಅಶೋಕ ನಾಯ್ಕ ಅವರಿಗೆ ಗಂಗಾ ನಾಯ್ಕ ಅವರ ಜೊತೆಗಿರುವ ಮನಸ್ಸಿದ್ದರೂ ಅದಕ್ಕೆ ಗಂಗಾ ನಾಯ್ಕ ಅವರು ಒಪ್ಪಿಗೆ ಸೂಚಿಸಿಲ್ಲ. `ಮಗುವಿಗಾಗಿ ಒಟ್ಟಿಗೆ ಬದುಕೋಣ’ ಎಂದು ಅಶೋಕ ನಾಯ್ಕ ಅವರು ಹೇಳಿದ್ದು, ಆಗಲೂ ಗಂಗಾ ನಾಯ್ಕ ಅವರು ಅದನ್ನು ಮನ್ನಿಸಲಿಲ್ಲ. ಹೀಗಾಗಿ `ನಿನಗೆ ಸಿಗದಿದ್ದದ್ದು ನನಗೂ ಸಿಗಬಾರದು’ ಎಂದ ಅಶೋಕ ನಾಯ್ಕ ಅವರು ಮಗುವಿನ ಅಪಹರಣ ಮಾಡುವುದಾಗಿಯೂ ಬೆದರಿಸಿದ್ದಾರೆ. ಡೈವರ್ಸ ಆದ ಕಾರಣಕ್ಕೆ ಸಿಟ್ಟಿನಿಂದಿದ್ದ ಅಶೋಕ ನಾಯ್ಕ ಅವರು 2022ರಲ್ಲಿ ಗಂಗಾ ನಾಯ್ಕ ಅವರ ಪರವಾಗಿ ಮಾತನಾಡಿದ್ದ ಅವರ ಮಾವ ವೀರಭದ್ರ ಮೈಲಾ ನಾಯ್ಕ ಅವರ ಮೇಲೆಯೂ ಕೈ ಮಾಡಿದ್ದಾರೆ.
ಈ ಎಲ್ಲದರ ನಡುವೆ ಒಂದು ವಾರದ ಹಿಂದೆ ಮತ್ತೆ ಗಂಗಾ ನಾಯ್ಕ ಅವರನ್ನು ಅಶೋಕ ನಾಯ್ಕ ಅವರು ಅಡ್ಡಗಟ್ಟಿದ್ದಾರೆ. ಆಗಲೂ `ಮಗುವಿಗಾಗಿ ಒಟ್ಟಿಗಿರೋಣ’ ಎಂದು ಹೇಳಿದ್ದಾರೆ. ಅದಕ್ಕೆ ಒಪ್ಪದ ಕಾರಣ `ಕೊಲೆ ಮಾಡುವೆ’ ಎಂದು ಬೆದರಿಸಿ ಅಲ್ಲಿಂದ ಹೋಗಿದ್ದಾರೆ. ಫೆಬ್ರವರಿ 12ರಂದು ಮತ್ತೆ ಹಸುವಂತೆ ಬಸ್ ನಿಲ್ದಾಣದ ಬಳಿ ಗಂಗಾ ನಾಯ್ಕ ಅವರು ನಿಂತಿದ್ದಾಗ ಸ್ಕೂಟಿ ಮೇಲೆ ಅಲ್ಲಿಗೆ ಬಂದ ಅಶೋಕ ನಾಯ್ಕ ಅವರು ಕತ್ತಿ ಬೀಸಿದ್ದಾರೆ. ಗಂಗಾ ನಾಯ್ಕ ಅವರ ತಲೆ ಹಿಡಿದು `ಕೆಲಸಕ್ಕೆ ಹೋಗುತ್ತಿದ್ದೀಯಾ?’ ಎಂದು ಪ್ರಶ್ನಿಸಿ ಬೈದಿದ್ದಾರೆ. ತಪ್ಪಿಸಲು ಬಂದ ಗಂಗಾ ನಾಯ್ಕ ಅವರ ತಂದೆ ಗಣಪತಿ ನಾಯ್ಕ ಅವರ ಮೇಲೆಯೂ ಕತ್ತಿಯ ದಾಳಿ ನಡೆಸಿದ್ದಾರೆ. ಈ ವೇಳೆ ಗಣಪತಿ ನಾಯ್ಕ ಅವರ ಕೈಗೆ ಕತ್ತಿ ತಾಗಿದೆ. ಕತ್ತಿಯ ಹಿಡಿಕೆ ಗಂಗಾ ನಾಯ್ಕ ಅವರಿಗೆ ತಾಗಿದ್ದು, ಅವರು ನೋವು ಅನುಭವಿಸಿದ್ದಾರೆ.
ಅದಾದ ನಂತರ ಅಶೋಕ ನಾಯ್ಕ ಅವರು ಗಂಗಾ ನಾಯ್ಕ ಅವರ ಕೂದಲು ಹಿಡಿದು ಎಳೆದಾಡಿದ್ದಾರೆ. ಕತ್ತಿನಲ್ಲಿದ್ದ ಮಾಂಗಲ್ಯದ ಸರ ಹರಿದು ಹಾಕಿದ್ದಾರೆ. ಗಣಪತಿ ನಾಯ್ಕ ಅವರ ಎದೆಗೆ ಗುದ್ದಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಹಿಂದೆ ಮಾಡಿದ ಹಲ್ಲೆ, ನೀಡಿದ ಕಿರುಕುಳ ಹಾಗೂ ಮೊನ್ನೆ ನಡೆದ ವಿದ್ಯಮಾನಗಳ ಬಗ್ಗೆ ಗಂಗಾ ನಾಯ್ಕ ಅವರು ಸಿದ್ದಾಪುರ ಪೊಲೀಸರ ಬಳಿ ಹೇಳಿದ್ದಾರೆ. ಎಲ್ಲಾ ವಿಷಯ ಆಲಿಸಿದ ಪಿಸೈ ಶಾಂತಿನಾಥ ಪಾಸಾನೆ ಅವರು ಅಶೋಕ ನಾಯ್ಕ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ.