ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ವಿವಿಧ ಸಮಸ್ಯೆಗಳ ಬಗ್ಗೆ ವಿವರಿಸಿದ್ದು, ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಕ್ಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಮನವಿ ಸ್ವೀಕಾರ ಮಾಡಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರು ಮಾಧವ ನಾಯಕ ಅವರ ಜೊತೆ ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾಧವ ನಾಯಕ ಅವರು ಕರ್ನಾಟಕ ಕರಾವಳಿಯ ಏಕೈಕ ಸರಕಾರಿ ವೈದ್ಯಕೀಯ ಕಾಲೇಜಿಗೆ ಅನುಭವಿ ನಿರ್ದೇಶಕರು, ತಜ್ಞ ವೈದ್ಯರು, ತಾಂತ್ರಿಕ ತಜ್ಞರು ಸೇರಿ ಅಗತ್ಯ ಸಿಬ್ಬಂದಿ ನೇಮಿಸುವಂತೆ ಆಗ್ರಹಿಸಿದ್ದಾರೆ. ಜೊತೆಗೆ ಗೋವಾ ಗಡಿಯಲ್ಲಿರುವ ಕಾರವಾರದ ಸರಕಾರಿ ವೈದ್ಯಕೀಯ ಕಾಲೇಜಿಗೆ ಅಗತ್ಯ ಸೌಕರ್ಯಗಳಿಲ್ಲದಿರುವ ಬಗ್ಗೆ ಗಮನಸೆಳೆದಿದ್ದಾರೆ.
`ಸಮಸ್ಯೆಗಳು ಸರಿಯಾಗಲು ಮುಖ್ಯವಾಗಿ ಕಿಮ್ಸ್ ಪ್ರಭಾರಿ ನಿರ್ದೇಶಕಿ ಡಾ ಪೂರ್ಣಿಮಾರನ್ನು ಬದಲಿಸಿ ಅನುಭವಿ ಸಮರ್ಥ ನಿರ್ದೇಶಕರನ್ನು ನೀಡಬೇಕು. ಬಿಪಿಎಲ್ ಕಾರ್ಡದಾರರಿಗೆ ಉಚಿತ ಚಿಕಿತ್ಸೆ ಒದಗಿಸಬೇಕು. ಇಲ್ಲಿ ಕೋಟ್ಯಂತರ ರೂಪಾಯಿಯ ವೈದ್ಯಕೀಯ ತಪಾಸಣಾ ಉಪಕರಣ ತಂದು ಬಳಕೆ ಆಗದ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು. ವೈದ್ಯಕೀಯ ವಿದ್ಯಾರ್ಥಿಗಳ ವಾಹನ ಅಪಘಾತ, ಮೀನುಗಾರ ಯುವಕನ ಸಾವಿನಲ್ಲಿ ವೈದ್ಯರ ಅಸಡ್ಡೆ, ಅಂಕೋಲಾದ ವ್ಯಕ್ತಿಯೊಬ್ಬರಿಗೆ ತುರ್ತು ಚಿಕಿತ್ಸೆ ನೀಡದೇ ಆದ ಸಾವು, ಆಂಬುಲೆನ್ಸನ ದುಬಾರಿ ವೆಚ್ಚ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಬಡ ಕುಟುಂಬಕ್ಕೆ ಹಾಗೂ ದಲಿತ ವರ್ಗದವರಿಗೆ ಉಚಿತವಾಗಿ ಹೆಚ್ಚಿನ ಚಿಕಿತ್ಸೆಗೆ ಒಯ್ಯಲು ಅಂಬ್ಯೂಲೆನ್ಸ್ ಉಚಿತವಾಗಿ ನೀಡಬೇಕು ಎಂದು ಮನವಿ ಮಾಡಿದರು.
`ಐಸಿಯೂಗಳಲ್ಲಿ ಅಡ್ಡಪರದೆ ಅಳವಡಿಸಬೇಕು. ಹೆರಿಗೆ ಕೋಣೆಯಲ್ಲಿ ಶೌಚಾಲಯ ಹಾಗೂ ನೀರಿನ ಸೌಕರ್ಯ ಒದಗಿಸಬೇಕು. ಕುಡಿಯುವ ನೀರು ಶುದ್ಧವಾಗಿರುವ ಹಾಗೇ ನೋಡಿಕೊಳ್ಳಬೇಕು. ಹೊರಗುತ್ತಿಗೆ ನೌಕರರ ಸಮಸ್ಯೆ ಬಗೆಹರಿಸಬೇಕು. ಅಗತ್ಯ ವೈದ್ಯರ ನೇಮಕಾತಿ ನಡೆಯಬೇಕು’ ಎಂದು ಆಗ್ರಹಿಸಿದರು. ಈ ಎಲ್ಲಾ ವಿಷಯದ ಬಗ್ಗೆ ಚರ್ಚಿಸಿದ ಸಚಿವ ಶರಣಪ್ರಕಾಶ ಪಾಟೀಲ ಬಡವರಿಗೆ ಉಚಿತ ಆಂಬುಲೆನ್ಸ್ ನೀಡಲು ಸೂಚನೆ ನೀಡಿದರು. `ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಬದಲು ಗೋವಾಗೆ ಹೋದರೆ ಅನುಕೂಲ’ ಎಂದು ಮಾಧವ ನಾಯಕ ಹಾಗೂ ಅಲ್ತಾಪ ಶೇಖ್ ಅವರು ಹೇಳಿದ್ದು, `ಆಯುಷ್ಮಾನ್ ಭಾರತ್’ ಅಲ್ಲಿಯೂ ಅನ್ವಯವಾಗುವ ನಿಟ್ಟಿನಲ್ಲಿ ಕ್ರಮ ಜರುಗಿಸಲು ಸೂಚಿಸಿದರು.