ಪ್ಲಾಸ್ಟಿಕ್ ಬಳಕೆ ತಡೆಯುವುದಕ್ಕಾಗಿ ಗೋಕರ್ಣದ ಔಷಧಿ ಅಂಗಡಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಿವಿ ಸ್ವಚ್ಛ ಮಾಡಲು ಬಳಸುವ ಬಡ್ಸ್ ವಶಕ್ಕೆಪಡೆದಿದ್ದಾರೆ. `ಪ್ಲಾಸ್ಟಿಕ್ ಅಂಶವಿರುವ ಕಾರಣ ಅದನ್ನು ಮಾರುವ ಹಾಗಿಲ್ಲ’ ಎಂದು ತಾಕೀತು ಮಾಡಿ, ದಂಡ ವಿಧಿಸಿದ್ದಾರೆ!
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಅಪರೂಪಕ್ಕೆ ಒಮ್ಮೆ ಏಕ ಬಳಕೆ ಪ್ಲಾಸ್ಟಿಕ್ ಮಾರಾಟ ತಡೆಗೆ ಮುಂದಾಗುತ್ತಾರೆ. ಆ ಅವಧಿಯಲ್ಲಿ ಎಲ್ಲಾ ಕಡೆ ದಾಳಿ ನಡೆಸಿ ದೊಡ್ಡ ದೊಡ್ಡ ಪ್ಲಾಸ್ಟಿಕ್ ಮೂಟೆಗಳನ್ನು ರಾಶಿ ಹಾಕುತ್ತಾರೆ. ಹಾಗೇ, ಮೊನ್ನೆ ಗೋಕರ್ಣದ ವಿವಿಧ ಮಳಿಗೆಗಳ ಮೇಲೆಯೂ ಆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರವಾರ ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿ ಬಿ ಕೆ ಸಂತೋಷ್ ಅವರ ಜೊತೆ ಗೋಕರ್ಣ ಪಂಚಾಯತ ಅಭಿವೃದ್ಧಿ ಅಧಿಕಾರಿ ವೆಂಕಟರಮಣ ಪಟಗಾರ ಹಾಗೂ ಗ್ರಾ ಪಂ ಕಾರ್ಯದರ್ಶಿ ಮಂಜುನಾಥ ಸೇರಿ ಅನೇಕ ಮಳಿಗೆಗಳ ಬಾಗಿಲು ತಟ್ಟಿದ್ದಾರೆ. ಪ್ಲಾಸ್ಟಿಕ್ ಸ್ಟಾç, ಕಪ್ ಮತ್ತು ಕ್ಯಾರಿಬ್ಯಾಗ್ ಜೊತೆ ಔಷಧಿ ಅಂಗಡಿಯಲ್ಲಿ ಮಾರಾಟವಾಗುತ್ತಿದ್ದ ಕಿವಿ ಸ್ವಚ್ಛ ಮಾಡುವ ಬಡ್ಸ್’ನ್ನು ಜಪ್ತು ಮಾಡಿದ್ದಾರೆ. ಈ ಎಲ್ಲವೂ ಸೇರಿ 24 ಕೆಜಿ ಪ್ಲಾಸ್ಟಿಕ್ ವಶಕ್ಕೆಪಡೆದು ಅದನ್ನು ಮಾರಾಟ ಮಾಡುವವರಿಂದ 1700ರೂ ದಂಡ ವಸೂಲಿ ಮಾಡಿದ್ದಾರೆ.
`ದಾಳಿ ಮಾಡಿದಕ್ಕೆ ಬೇಸರವಿಲ್ಲ. ದಂಡ ಪಾವತಿಸುವುದು ಸಹ ದೊಡ್ಡದಲ್ಲ. ಆದರೆ, ಸಣ್ಣ ಸಣ್ಣ ವ್ಯಾಪಾರಿಗಳ ಮೇಲೆ ಕ್ರಮ ಜರುಗಿಸುವ ಅಧಿಕಾರಿಗಳಿಗೆ ಕಂಪನಿ ಮಾಲಕರಿಗೆ ಬಿಸಿ ಮುಟ್ಟಿಸುವ ಧೈರ್ಯವಿಲ್ಲ’ ಎಂದು ಅಂಗಡಿಕಾರರು ಆಕ್ರೋಶವ್ಯಕ್ತಪಡಿಸಿದ್ದಾರೆ. `ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ವಶಕ್ಕೆಪಡೆದಿದ್ದು ಸರಿಯಾಗಿದೆ. ಆದರೆ, ಟಿಶ್ಯು ಪೆಪರ್, ಕಿವಿ ಸ್ವಚ್ಚ ಮಾಡುವ ಬಡ್ಸನ್ನು ಬಿಡದೇ ಜಪ್ತು ಮಾಡಿದ್ದು ಸರಿಯಲ್ಲ. ಖರೀದಿ ಬಿಲ್ ತೋರಿಸಿದರೂ ಅದನ್ನು ಬಿಟ್ಟಿಲ್ಲ’ ಎಂದು ಅಂಗಡಿಕಾರರು ದೂರಿದ್ದಾರೆ.