ಕಾರವಾರದಲ್ಲಿ ಜನ ಮೆಚ್ಚಿದ ಅಧಿಕಾರಿಯಾಗಿದ್ದ ವಿನೋದ ಅಣ್ವೇಕರ್ ಅವರ ಮುಡಿಗೆ ಮತ್ತೊಂದು ಪ್ರಶಸ್ತಿ ಸಿಕ್ಕಿದೆ. 35 ವರ್ಷಗಳ ಸರ್ಕಾರಿ ಸೇವೆ ಸಲ್ಲಿಸಿದ ಅವರು ಉತ್ತರ ಕನ್ನಡ ಜಿಲ್ಲಾ ಮಟ್ಟದ 2023ರ ‘ಸರ್ವೋತ್ತಮ ಸೇವಾ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಸರ್ಕಾರಿ ಕಚೇರಿ ಎಂದರೆ ಕಡತಗಳು, ಸಹಿಗಳು ಮತ್ತು ಸಮಯದ ಒತ್ತಡ—ಇದೇ ಸಾಮಾನ್ಯ ಚಿತ್ರ. ಆದರೆ ಈ ವ್ಯವಸ್ಥೆಯೊಳಗೇ ನಿಂತು ಆಡಳಿತಕ್ಕೆ ಮನುಷ್ಯತ್ವದ ಅರ್ಥ ನೀಡಿದ ಅಧಿಕಾರಿಗಳಲ್ಲಿ ವಿನೋದ್ ವಾಮನ ಅಣ್ವೇಕರ ಅವರು ಮೊದಲ ಸ್ಥಾನದಲ್ಲಿ ಕಾಣುತ್ತಾರೆ. ಅಂಕೋಲಾ ತಾಲೂಕಿನ ಅವರ್ಸಾದ ಗ್ರಾಮೀಣ ಹಿನ್ನಲೆಯಲ್ಲಿ ಬೆಳೆದ ಅಣ್ವೇಕರ ಅವರ ತಂದೆ ನಿವೃತ್ತ ಮುಖ್ಯಧ್ಯಾಪಕರಾಗಿದ್ದರು. ತಂದೆ ವಾಮನ ಕೃಷ್ಣ ಅಣ್ವೇಕರ ಅವರು ಕಲಿಸಿದ ಸಂಸ್ಕಾರವನ್ನು ಜೀವನದ ದಿಕ್ಕಾಗಿಸಿಕೊಂಡ ವಿನೋದ ಅಣ್ವೇಕರ್ ಅವರು ಜನರ ಸಂಕಷ್ಟಗಳ ನೇರ ಅನುಭವ ಮತ್ತು ಶಿಕ್ಷಣದ ಮೌಲ್ಯವೇ ಅವರ ಆಡಳಿತದ ದೃಷ್ಟಿಕೋನಕ್ಕೆ ಅಳವಡಿಕೊಂಡು ಜನ ಮೆಚ್ಚುಗೆಗಳಿಸಿದ್ದಾರೆ.
31 ಅಕ್ಟೋಬರ್ 1989ರಂದು ಕಾರವಾರದಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಯಾಗಿ ಸರ್ಕಾರಿ ಸೇವೆ ಆರಂಭಿಸಿದ ಅವರು, ಹುದ್ದೆಯನ್ನು ಗುರಿಯನ್ನಾಗಿಸದೇ ಜವಾಬ್ದಾರಿಯನ್ನೇ ಸೇವೆಯ ಕೇಂದ್ರಬಿಂದು ಮಾಡಿಕೊಂಡರು. ಅಂಕಿಅಂಶಗಳನ್ನು ಕೇವಲ ಸಂಖ್ಯೆಗಳಂತೆ ಅಲ್ಲ, ಸಮಾಜದ ಜೀವನಾಡಿಯಂತೆ ನೋಡಿದ ಅವರ ದೃಷ್ಟಿ ಎಲ್ಲ ಹುದ್ದೆಗಳಲ್ಲೂ ಒಂದೇ ಆಗಿತ್ತು. ಡೇಟಾ ಶುದ್ಧವಾಗಬೇಕು. ಯೋಜನೆ ನೆಲಮಟ್ಟ ತಲುಪಬೇಕು.ಫಲಾನುಭವಿಗೆ ನಿಜವಾದ ಲಾಭ ಸಿಗಬೇಕು ಎಂಬ ನಿಟ್ಟಿನಲ್ಲಿ ಅವರು ಸಾಕಷ್ಟು ಶ್ರಮಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ಗಳಲ್ಲಿ ಸೇವೆ ಸಲ್ಲಿಸಿದ ಅವರು,
2010–11ರಲ್ಲಿ ಹುಬ್ಬಳ್ಳಿಯಲ್ಲಿ ಆರೋಗ್ಯ ಇಲಾಖೆಯ ತರಬೇತಿ ಕೇಂದ್ರದಲ್ಲಿ ಬೋಧಕ,
2011ರಲ್ಲಿ ಅಂಕೋಲಾ ತಾಪಂ ಯೋಜನಾಧಿಕಾರಿ, 2014ರಲ್ಲಿ ಬೆಳಗಾವಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ,
2017–18ರಲ್ಲಿ ಉತ್ತರ ಕನ್ನಡ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, 2018ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಯೋಜನಾ ಅಂದಾಜು–ಮೌಲ್ಯಮಾಪನಾಧಿಕಾರಿ, 2019 – 20ರಲ್ಲಿ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಪಂ ಮುಖ್ಯ ಯೋಜನಾಧಿಕಾರಿ, 2021–2024ರಲ್ಲಿ ಹೊನ್ನಾವರ ತಾಪಂ ಆಡಳಿತಾಧಿಕಾರಿ ಸೇರಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಉನ್ನತ ಹುದ್ದೆಯಲ್ಲಿದ್ದರೂ ಸರ್ಕಾರಿ ಬಸ್ ಪ್ರಯಾಣ, ಕಚೇರಿಯ ಕೊನೆಯ ಸಿಬ್ಬಂದಿಗೂ ಸಮಾನ ಗೌರವ, ಸಾರ್ವಜನಿಕರನ್ನು ಅರ್ಜಿದಾರರಂತೆ ಅಲ್ಲ—ನಾಗರಿಕರಂತೆ ನೋಡುವ ದೃಷ್ಟಿ ಅವರ ಆಡಳಿತದ ನಿಜವಾದ ಶಕ್ತಿ. ಶಿಕ್ಷಣ ಪ್ರೋತ್ಸಾಹ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೌನ ಬೆಂಬಲ ಇವೆಲ್ಲವೂ ವಾಮನ ಅಣ್ವೇಕರ್ ಅವರು ಪ್ರಚಾರವಿಲ್ಲದೆ ನಡೆದ ಸೇವೆಗಳಾಗಿವೆ.
ಈ ಎಲ್ಲಾ ಹಿನ್ನಲೆ ಅವರಿಗೆ ಸಾಕಷ್ಟು ಪ್ರಶಸ್ತಿಗಳು ಸಿಕ್ಕಿದೆ. ಕಾಯಕ ರತ್ನ (2022–23), ಉತ್ತರ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2024–25) ಮತ್ತು ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ (2023)—ಈ ಗೌರವಗಳು ಅವರ ಸೇವೆಯ ಪ್ರತಿಫಲ. ಗೌರವ ಸ್ವೀಕಾರದ ವೇಳೆ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಜಿಪಂ ಸಿಇಓಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರ ನಡೆ, ಅಹಂಕಾರವಿಲ್ಲದ ನಾಯಕತ್ವಕ್ಕೆ ಸಾಕ್ಷಿ. ಹುದ್ದೆಗಳು ಮುಗಿಯಬಹುದು. ಆದರೆ ಮೌಲ್ಯಾಧಾರಿತ ಸೇವೆ ಉಳಿಯುತ್ತದೆ.