ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಸಿ ಗಾಳಿ ಮುಂದುವರೆದಿದ್ದು, ಫೆಬ್ರವರಿ 17 ಹಾಗೂ 18ರಂದು ಗರಿಷ್ಟ 38.9 ಡಿಗ್ರಿ ಸೆಲ್ಸಿಯಸ್’ನಷ್ಟು ಉಷ್ಣಾಂಶ ಕಾಣುವ ಲಕ್ಷಣಗಳಿವೆ. .
ಈ ರೀತಿಯ ಉಷ್ಣಾಂಶದ ಏರಿಕೆ ದೇಹದ ಉಷ್ಣ ನಿಯಂತ್ರಣ ವ್ಯವಸ್ಥೆಗೆ ಒತ್ತಡ ಹೆಚ್ಚಾಗಲಿದೆ. ಉಷ್ಣಾಂಶ ಹೆಚ್ಚಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಹೆಚ್ಚಿದ ಬಿಸಿಲಿನ ಪರಿಣಾಮವಾಗಿ ದೇಹದಲ್ಲಿ ನೀರಿನ ಕೊರತೆ ಉಂಟಾಗಲಿದ್ದು ಅದರಿಂದ ತಲೆ ಸುತ್ತುವುದು, ದೌರ್ಬಲ್ಯ, ಅತಿಯಾದ ದಣಿವು, ತಲೆನೋವು, ಚರ್ಮದ ಒಣತನ ಹಾಗೂ ಉಷ್ಣಾಘಾತ ಸೇರಿ ವಿವಿಧ ಆರೋಗ್ಯ ಸಮಸ್ಯೆಗಳ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ.
ಸಾಮಾನ್ಯ ದಿನಗಳಿಗಿಂದ ಸುಮಾರು 4 ಡಿಗ್ರಿ ಸೆಲ್ಸಿಯಸ್ ಹೆಚ್ಚುವರಿ ಉಷ್ಣಾಂಶ ಕಾಣಬರುವ ಬಗ್ಗೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನಲೆ ಜನಹಿತಕ್ಕಾಗಿ ಜಿಲ್ಲಾಡಳಿತ ವಿವಿಧ ಸಲಹೆಗಳನ್ನು ಪ್ರಕಟಿಸಿದೆ. `ದಿನಪೂರ್ತಿ ಸಾಕಷ್ಟು ನೀರು ಕುಡಿಯಿರಿ. ದಾಹವಾಗದಿದ್ದರೂ ನೀರನ್ನು ನಿಯಮಿತವಾಗಿ ಸೇವಿಸಿ’ ಎಂದು ಜಿಲ್ಲಾಡಳಿತ ಜನರಿಗೆ ಕರೆ ನೀಡಿದೆ. `ನಿಂಬೆ ನೀರು, ಮಜ್ಜಿಗೆ, ತೆಂಗಿನ ನೀರು ಮುಂತಾದ ದ್ರವಗಳನ್ನು ಹೆಚ್ಚಾಗಿ ಸೇವಿಸಿ. ಹಗುರವಾದ, ತೆಳುವಾದ ಬಣ್ಣದ ಹಾಗೂ ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ತಲೆ ಮತ್ತು ಮುಖವನ್ನು ಟೋಪಿ, ಛತ್ರಿ, ಗಮಚಾ ಅಥವಾ ರುಮಾಲಿನಿಂದ ಮುಚ್ಚಿಕೊಳ್ಳಿ’ ಎಂದು ಸಲಹೆ ನೀಡಿದೆ.
`ಸಾಧ್ಯವಾದಷ್ಟು ತೀವ್ರ ಬಿಸಿಲಿನ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ. ಅದರಲ್ಲಿಯೂ, ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ಮನೆಯಲ್ಲಿರುವ ಬಗ್ಗೆ ರೂಢಿಸಿಕೊಳ್ಳಿ. ಹೊರಗೆ ಕೆಲಸ ಮಾಡುವಾಗ ಮಧ್ಯಂತರವಾಗಿ ನೆರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ. ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ಅಸ್ವಸ್ಥರಿಗೆ ವಿಶೇಷ ಕಾಳಜಿವಹಿಸಿ’ ಎಂದು ಜಿಲ್ಲಾಡಳಿತ ಕಿವಿಮಾತು ಹೇಳಿದೆ. `ತಲೆ ಸುತ್ತು, ಅತಿಯಾದ ದೌರ್ಬಲ್ಯ, ವಾಂತಿ, ಜ್ವರ ಅಥವಾ ಅಸ್ವಸ್ಥತೆಯ ಲಕ್ಷಣಗಳು ಕಂಡುಬoದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ಸಮರ್ಪಕ ಗಾಳಿ ಹರಿವಿಗೆ ಅವಕಾಶ ಕಲ್ಪಿಸಿ’ ಎಂದು ಸೂಚಿಸಿದೆ.
ಇದರೊಂದಿಗೆ `ಯಾವುದೇ ಕಾರಣಕ್ಕೂ ತೀವ್ರ ಬಿಸಿಲಿನ ಸಮಯದಲ್ಲಿ ಅನಾವಶ್ಯಕವಾಗಿ ಹೊರಗೆ ಹೋಗಬೇಡಿ. ಮದ್ಯಪಾನ, ಅಧಿಕ ಕಾಫಿ ಅಥವಾ ಹೆಚ್ಚು ಸಿಹಿ ಪಾನೀಯಗಳನ್ನು ಸೇವಿಸಬೇಡಿ. ತೀವ್ರ ಬಿಸಿಲಿನ ಸಮಯದಲ್ಲಿ ಕಠಿಣ ಶಾರೀರಿಕ ಕೆಲಸಗಳನ್ನು ಮಾಡಬೇಡಿ. ಮಕ್ಕಳನ್ನು ಅಥವಾ ಪ್ರಾಣಿಗಳನ್ನು ಮುಚ್ಚಿದ ವಾಹನಗಳಲ್ಲಿ ಬಿಟ್ಟು ಹೋಗಬೇಡಿ. ಅತಿಯಾದ ಮಸಾಲೆ ಮತ್ತು ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಡಿ. ಉಷ್ಣಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ತಲೆ ಮುಚ್ಚಿಕೊಳ್ಳದೆ ನೇರವಾಗಿ ಬಿಸಿಲಿಗೆ ಒಡ್ಡಿಕೊಳ್ಳಬೇಡಿ’ ಎಂದು ಜಿಲ್ಲಾಡಳಿತ ಮಾಹಿತಿ ರವಾನಿಸಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿ ಸಂಖ್ಯೆ 1077 ಅಥವಾ 9483511015ನ್ನು ಸಂಪರ್ಕಿಸುವoತೆ ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಅವರು ಮನವಿ ಮಾಡಿದ್ದಾರೆ.