ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಪಡೆದಿದ್ದ ಹೋರಿಯೊಂದು ಮುಂಡಗೋಡಿನ ಮಳಗಿ ಜಲಾಶಯದಲ್ಲಿನ ಬಲೆಗೆ ಬಿದ್ದು ಸಾವನಪ್ಪಿದೆ!
ಮುಂಡಗೋಡದ ಕುರ್ಲಿಯಲ್ಲಿ ನಡೆದ ರಾಜ್ಯಮಟ್ಟದ ಹೋರಿ ಸ್ಪರ್ಧೆಗೆ ಹಾವೇರಿಯ `ವಿಬಿಪಿ ಡಾನ್’ ಎಂಬ ಹೋರಿ ಆಗಮಿಸಿತ್ತು. ಹೊಂಬರಡಿ ಗ್ರಾಮದ ಶ್ರೀಶೈಲ್ ಬೆಲವಾಡಿ ಅವರ ಈ ಹೋರಿ ಮೈದಾನಕ್ಕೆ ಇಳಿದು ಎಲ್ಲರನ್ನು ಆಕರ್ಷಿಸಿತ್ತು. ಆ ಹೋರಿಯ ಚುರುಕು ಚಲನ-ವಲನವನ್ನು ಜನ ಕಣ್ತುಂಬಿಕೊAಡಿದ್ದರು. ಶುಕ್ರವಾರ ಸ್ಪರ್ಧೆಗೆ ಬಿಟ್ಟಿದ್ದ ಹೋರಿ ಮೈದಾನ ಬಿಟ್ಟು ಹೊರ ಹೋಗಿದ್ದು, ಯಾರ ಕೈಗೂ ಸಿಕ್ಕಿರಲಿಲ್ಲ.
ಆ ಹೋರಿ ಅರಣ್ಯದ ಕಡೆ ಓಡಿತು. ಮಾಲಕರ ಜೊತೆ ಇನ್ನಿತರರು ಹೋರಿಯನ್ನು ಹುಡುಕಿ ಹೊರಟರು. ಆದರೆ, ಎಲ್ಲರ ಕಣ್ತಪ್ಪಿಸಿದ ಹೋರಿ ಕಾಡಿನ ಕಡೆ ಹೋಗಿದ್ದು, ರಾತ್ರಿಯಿಡೀ ಕರೆದರೂ ಊರಿನ ಕಡೆ ಬರಲಿಲ್ಲ. `ಆಗಾಗ ಈ ಹೋರಿ ಹೀಗೆ ಓಡುವುದು ಸಾಮಾನ್ಯ. ಸ್ವಲ್ಪ ಸಮಯದಲ್ಲಿ ಮರಳುತ್ತದೆ’ ಎಂದು ಮಾಲಕರು ಭಾವಿಸದ್ದರು. ಅದಾಗಿಯೂ, ಕತ್ತಲ ದಾರಿಯಲ್ಲಿ ಹೋರಿಯನ್ನು ಕರೆಯುತ್ತ ಸುತ್ತಾಟ ನಡೆಸಿದ್ದರು.
ರಾತ್ರಿಯಿಡೀ ಹುಡುಕಿದರೂ ಹೋರಿಯ ಸದ್ದು ಕೇಳಿಸಲಿಲ್ಲ. ಆದರೆ, ಶನಿವಾರ ಬೆಳಗ್ಗೆ ಹೊರಿ ಜಲಾಶಯದ ಬಳಿ ಶವವಾಗಿರುವ ಸುದ್ದಿ ಕೇಳಿಸಿತು. ಅಲ್ಲಿ ಹೋಗಿ ನೋಡಿದಾಗ ಮೀನಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿ ಆ ಹೋರಿ ಕೊನೆಯುಸಿರೆಳೆದಿತ್ತು.
ನೀರಿನಿಂದ ತಪ್ಪಿಸಿಕೊಂಡು ಬಾರದೇ ಒದ್ದಾಟ ನಡೆಸಿದ ಹೋರಿ ಅಲ್ಲಿಯೇ ಸಾವನಪ್ಪಿರುವುದು ಗೊತ್ತಾಯಿತು. ಊರಿನವರೆಲ್ಲ ಸೇರಿ ತೆಪ್ಪದ ಸಹಾಯದಿಂದ ಹೋರಿಯ ಶವ ಮೇಲೆತ್ತಿದರು. ಕೆಲವರು ಹೋರಿ ಬದುಕಿರಬಹುದು ಎಂದು ಅಂದಾಜಿಸಿ ಅದರ ಮೈಮೇಲೆ ಬಡಿದರು. ಆದರೆ, ಹೋರಿ ಸಾವನಪ್ಪಿರುವುದನ್ನು ಅರಿತು ಕಣ್ಣೀರು ಸುರಿಸಿದರು.