ಟಿವಿ ಕ್ಯಾಮರಾದ ಮುಂದೆ ಬುರುಡೆ ಭವಿಷ್ಯ ನುಡಿದು ಪ್ರಸಿದ್ಧಿಪಡೆದಿದ್ದ ಕಮಲಾಕರ ಭಟ್ಟ ಅವರು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಕಚೇರಿ ಕೆಲಸದಾಕೆ ಸುಚಿತ್ರಾ ನಾಯ್ಕ ಅವರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕಮಲಾಕರ ಭಟ್ಟರು ಸುಚಿತ್ರಾ ನಾಯ್ಕ ಅವರ ಮಗಳ ವಿಷಯದಲ್ಲಿ ಮೂಗು ತೂರಿಸಲು ಹೋಗಿ ಜೈಲು ಪಾಲಾಗಿದ್ದಾರೆ.
ಸಿದ್ದಾಪುರದ ಮಹೇಶ ಜಟ್ಟಾ ನಾಯ್ಕ ಅವರು 20 ವರ್ಷದ ಹಿಂದೆ ಸುಚಿತ್ರಾ ನಾಯ್ಕ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಸುಮಿತ್ರಾ ಮಹೇಶ ದಂಪತಿಗೆ ಸುಮಶ್ರೀ ಹಾಗೂ ಅಮೃತಾ ಎಂಬ ಮಕ್ಕಳಿದ್ದರು. ಈ ದಂಪತಿ ಕುಟುಂಬಸಹಿತ ಸಿದ್ದಾಪುರ ತಾಲೂಕಿನ ಬೆಳ್ಳಟ್ಟೆಯ ವಡ್ನಗದ್ದೆಯಲ್ಲಿ ವಾಸವಾಗಿದ್ದರು.
ಈ ನಡುವೆ ಸುಮಿತ್ರಾ ನಾಯ್ಕ ಅವರಿಗೆ ಕಮಲಾಕರ ಭಟ್ಟರ ಪರಿಚಯವಾಗಿದ್ದು, ಕಮಲಾಕರ ಭಟ್ಟರ ಜೊತೆ ಸುಮಿತ್ರಾ ನಾಯ್ಕ ಅವರು ಅಕ್ರಮ ಸಂಬಂಧಹೊಂದಿದ್ದರು. ಮಹೇಶ ನಾಯ್ಕ ಅವರು ಬೆಂಗಳೂರಿನ ಹೊಟೇಲ್ ಒಂದರಲ್ಲಿ ಕೆಲಸಕ್ಕೆ ಹೋದಾಗ ಸುಮಿತ್ರಾ ಅವರು ಕಮಲಾಕರ ಭಟ್ಟರ ಶಿವಮೊಗ್ಗದ ಕಚೇರಿಯ ಕೆಲಸಕ್ಕೆ ಸೇರಿದ್ದರು.
ಸುಮಿತ್ರಾ ನಾಯ್ಕ ಹಾಗೂ ಕಮಲಾಕರ ಭಟ್ಟ ಸೇರಿ ಸುಮಶ್ರೀ ಹಾಗೂ ಅಮೃತ ಎಂಬ ಮಕ್ಕಳಿಗೆ ನಿತ್ಯ ಹಿಂಸಿಸುತ್ತಿದ್ದರು. ಇದನ್ನು ಸಹಿಸದ ಸುಮಿತ್ರಾ ತಮಗಾದ ಹಿಂಸೆಯ ಬಗ್ಗೆ ತಂದೆಗೆ ಮೆಸೆಜ್ ಮಾಡಿದ್ದರು. ‘ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಿ. ಇಲ್ಲವಾದರೆ ಸಾಯುತ್ತೇವೆ’ ಎಂದು ಸುಮಶ್ರೀ ಮೆಸೆಜ್ ಮಾಡಿದ್ದರು. ಆ ಮೆಸೆಜ್ ನೋಡಿದ ಮಹೇಶ ನಾಯ್ಕ ಅವರು ಸೋಮವಾರ ಮಗಳು ಸುಮಶ್ರೀ ಅವರನ್ನು ಸಿದ್ದಾಪುರಕ್ಕೆ ಕರೆಯಿಸಿದ್ದರು. ಪೊಲೀಸ್ ಠಾಣೆ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಮುಂದೆ ಹಾಜರುಪಡಿಸಿ ಮಕ್ಕಳ ಮೇಲಾದ ದೌರ್ಜನ್ಯದ ಬಗ್ಗೆ ದೂರು ಕೊಡಿಸಿದ್ದರು.
ಅದಾದ ನಂತರ ಮಹೇಶ ನಾಯ್ಕ ಅವರು ಮಗಳ ಜೊತೆ ಅಣ್ಣ ವಸಂತ ನಾಯ್ಕ ಅವರ ಮನೆಗೆ ಬಂದರು. ಪತ್ನಿಯ ಕಾಟ ಹಾಗೂ ಕಿರುಕುಳದ ಬಗ್ಗೆ ಅಣ್ಣನ ಕುಟುಂಬದವರಲ್ಲಿ ಹೇಳಿಕೊಂಡರು. ಸುಮಶ್ರೀ ಅವರು ಸಹ ತಾಯಿಯ ಅಕ್ರಮ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದು, ತಮಗಾದ ತೊಂದರೆಗಳನ್ನು ಹೇಳಿದರು. ಆ ದಿನ ರಾತ್ರಿ ಎಲ್ಲರೂ ಊಟಕ್ಕೆ ಉಳಿತಾಗ ಸುಚಿತ್ರಾ ನಾಯ್ಕ, ಅವರ ತಂದೆ ಲೋಕನಾಥ ನಾಯ್ಕ, ಹೆಮ್ಮಿನಬೈಲಿನ ಕಮಲಾಕರ ಭಟ್ಟ ಜೊತೆ ಮತ್ತೆ ನಾಲ್ಕು ಜನ ಅವರೆಕೊಪ್ಪದ ವಸಂತ ನಾಯ್ಕ ಅವರ ಮನೆಗೆ ಬಂದರು. ನಾಲ್ಕು ಜನ ಅಪರಿಚಿತರು ಕೈಯಲ್ಲಿ ಚಾಕು ಹಿಡಿದಿದ್ದು, ಸುಮಶ್ರೀ ಅವರನ್ನು ಹೆದರಿಸಿ ಕೋಣೆಯಲ್ಲಿ ಕೂಡಿಹಾಕಿದರು.
ಇದನ್ನು ತಡೆಯಲು ಬಂದ ವಸಂತ ನಾಯ್ಕ ಅವರ ಎದೆಗೆ ಆ ಅಪರಿಚಿತರು ಚಾಕು ಹಾಕಿದರು. ಹೊಡೆದಾಟ ತಪ್ಪಿಸಲು ಬಂದ ಮಹೇಶ ನಾಯ್ಕ ಹಾಗೂ ಕುಮಾರ ನಾಯ್ಕ ಎಂಬಾತರ ಹೊಟ್ಟೆಗೂ ಅವರು ಚಾಕು ಚುಚ್ಚಿದರು. ಈ ವೇಳೆ ವಸಂತ ನಾಯ್ಕ ಅವರ ಪತ್ನಿ ಸಂಧ್ಯಾ ನಾಯ್ಕ ಅವರು ಪೊಲೀಸರಿಗೆ ಪೋನ್ ಮಾಡಿದರೂ ತಾಗಲಿಲ್ಲ. ಸಂಧ್ಯಾ ಅವರು ತಮ್ಮ ಅತ್ತೆಯ ಮಗ ಬಳ್ಳುವಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದರು.
ಆದರೆ, ಈ ವೇಳೆಗಾಗಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಸಂತ ನಾಯ್ಕ ಅವರು ಸಾವನಪ್ಪಿದ್ದರು. ಮಹೇಶ ನಾಯ್ಕ ಹಾಗೂ ಕುಮಾರ ನಾಯ್ಕ ಅವರನ್ನು ಬಾಡಿಗೆ ಮನೆಯಲ್ಲಿದ್ದ ಮಂಗಲಾ ಟೀಚರ್, ಬಸ್ ಕಂಡೆಕ್ಟರ್ ಮಂಜಣ್ಣ ಹಾಗೂ ಅಕ್ಕಪಕ್ಕದ ಮನೆಯ ರಾಮಚಂದ್ರ ಕೆರಿಯಾ ನಾಯ್ಕ ಅವರು ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡಿದರು.
ರಾಮಚಂದ್ರ ನಾಯ್ಕ ಅವರ ಕಾರಿನಲ್ಲಿ ಅವರೆಲ್ಲರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ವೈದ್ಯರು ವಸಂತ ನಾಯ್ಕ ಸಾವುನ್ನು ದೃಢಪಡಿಸಿದರು. ಗಾಯದಿಂದ ನರಳಾಡುತ್ತಿದ್ದ ಮತ್ತಿಬ್ಬರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಕೊಲೆ ಹಾಗೂ ಹಲ್ಲೆ ಪ್ರಕರಣದ ವೇಳೆ ಕಮಲಾಕರ ಭಟ್ಟ ಅವರು ಕಾರಿನಲ್ಲಿದ್ದು, ಅವರ ಕುಮ್ಮಕ್ಕಿನ ಬಗ್ಗೆ ಸಂಧ್ಯಾ ನಾಯ್ಕ ಅವರು ಪೊಲೀಸ್ ದೂರು ನೀಡಿದರು. ಈ ಹಿನ್ನಲೆ ಕಮಲಾಕರ ಭಟ್ಟ ಹಾಗೂ ಅವರ ಆರು ಜನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.