ಮನೆಯಲ್ಲಿ ಸಾಕಿದ ನಾಯಿ ಕಚ್ಚಿದ ಪರಿಣಾಮ ಶೋಭಾ ನಾಯ್ಕ ಅವರಿಗೆ ರೇಬಿಸ್ ಲಕ್ಷಣ ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ ಒಳಗಾದರೂ ರೋಗವಾಸಿಯಾಗದೇ ಅವರು ಸಾವನಪ್ಪಿದ್ದಾರೆ.
ಅಂಕೋಲಾದ ಬೇಲಿಕೆರೆ ಬೋಗ್ರಿಗದ್ದೆ ಬಳಿ ಶೋಭಾ ಪುರ್ಸಪ್ಪ ನಾಯ್ಕ ಅವರು ವಾಸವಾಗಿದ್ದರು. ತಮ್ಮ 74ನೇ ವಯಸ್ಸಿನಲ್ಲಿಯೂ ಅವರು ಉತ್ಸಾಹದಿಂದ ಬದುಕು ಕಟ್ಟಿಕೊಂಡಿದ್ದರು. ಮನೆ ಭದ್ರತೆಗಾಗಿ ಅವರು ನಾಯಿ ಸಾಕಿದ್ದು, ಅತಿಯಾಗಿ ಮುದ್ದಿಸುತ್ತಿದ್ದ ನಾಯಿಯೇ ಅವರಿಗೆ ಒಮ್ಮೆ ಕಚ್ಚಿತು. ಮೂರು ತಿಂಗಳ ಹಿಂದೆ ನಾಯಿಯನ್ನು ಹಗ್ಗದಿಂದ ಕಟ್ಟುವ ವೇಳೆ ನಾಯಿ ಅದನ್ನು ವಿರೋಧಿಸಿ ಗಾಯ ಮಾಡಿತು. ನಾಯಿ ಕಚ್ಚಿದಕ್ಕಾಗಿ ಶೋಭಾ ನಾಯ್ಕ ಅವರು ಅಂಕೋಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದರು. ಆದರೆ, ವೈದ್ಯರು ಸೂಚಿಸಿದ ಪ್ರಕಾರ ಔಷಧಗಳನ್ನು ಸರಿಯಾಗಿ ಸೇವಿಸಲಿಲ್ಲ. ರೋಗ ಉಲ್ಬಣಿಸಿದರೂ ಚಿಕಿತ್ಸೆ ಕಡೆ ಆಸಕ್ತಿವಹಿಸಲಿಲ್ಲ.
ಫೆಬ್ರವರಿ 2ರಂದು ಶೋಭಾ ನಾಯ್ಕ ಅವರಿಗೆ ಎದೆನೋವು ಕಾಣಿಸಿತು. ಕುಟುಂಬದವರು ಶೋಭಾ ನಾಯ್ಕ ಅವರನ್ನು ಅಂಕೋಲಾದ ಕ್ರಿಸ್ತಮಿತ್ರ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ರೇಬಿಸ್ ರೋಗದ ಲಕ್ಷಣವಿರುವುದಾಗಿ ಹೇಳಿದರು. ಕಾರವಾರ ಆಸ್ಪತ್ರೆಗೆ ಹೋಗಲು ಸೂಚಿಸಿದರು. ಅಲ್ಲಿನ ವೈದ್ಯರು ಹುಬ್ಬಳ್ಳಿಯ ಕಿಮ್ಸ್’ಗೆ ಶಿಫಾರಸ್ಸು ಮಾಡಿದರು. ಆದರೆ, ಅಲ್ಲಿ ಹೋದರೂ ಸಹ ಶೋಭಾ ನಾಯ್ಕ ಅವರು ಬದುಕಲಿಲ್ಲ. ಪೊಲೀಸ್ ಸಿಬ್ಬಂದಿ ವಾಣಿ ನಾಯಕ ಅವರಿಗೆ ಶೋಭಾ ನಾಯ್ಕ ಅವರು ಸಾವನಪ್ಪಿರುವ ಬಗ್ಗೆ ಆಸ್ಪತ್ರೆಯವರು ತಿಳಿಸಿದ್ದು, ತಾಯಿ ಮರಣದ ಬಗ್ಗೆ ಸೀಬರ್ಡ ಹೊರಗುತ್ತಿಗೆ ಉದ್ಯೋಗಿ ಜೀವನ ನಾಯ್ಕ ಅವರು ಪ್ರಕರಣ ದಾಖಲಿಸಿದರು.