ವಯಕ್ತಿಕ ಬಳಕೆಗಾಗಿ ಖರೀದಿಸಿದ ಕಾರುಗಳನ್ನು ಬಾಡಿಗೆಗೆ ಕಳುಹಿಸಿ ಹಣ ಸಂಪಾದಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ನಿರ್ಧರಿಸಿದೆ.
ನಿಯಮಗಳನ್ನು ಉಲ್ಲಂಘಿಸಿ ಬಾಡಿಗೆಗೆ ಬರುವ ವಾಹನಗಳ ಪರವಾನಿಗೆ ರದ್ದುಪಡಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಸೂಚನೆ ನೀಡಿದ್ದಾರೆ. ಖಾಸಗಿ ವಾಹನಗಳಲ್ಲಿ ಪ್ರವಾಸಿಗಳನ್ನು ಕರೆದೊಯ್ಯುತ್ತಿರುವ ಕುರಿತಂತೆ ಟ್ಯಾಕ್ಸಿ ಚಾಲಕರು ನೀಡಿದ ದೂರಿಗೆ ಅವರು ಸ್ಪಂದಿಸಿದ್ದು, `ಅಂಥಹ ವಾಹನಗಳ ಕುರಿತು ಟ್ಯಾಕ್ಸಿ ಚಾಲಕರು ಪೋಟೋಸಹಿತ ದೂರು ನೀಡಿದ್ದಾರೆ. ಈ ಕುರಿತು ಪರಿಶೀಲಿಸಿ ನಿಯಮಾನುಸಾರ ದಂಡ ವಿಧಿಸಿ, ಪದೇ ಪದೇ ಇದನ್ನು ಪುನಾರಾವರ್ತನೆ ಮಾಡುತ್ತಿರುವ ವಾಹನಗಳ ಲೈಸೆನ್ಸ್ ರದ್ದುಗೊಳಿಸಬೇಕು’ ಎಂದು ಸೂಚಿಸಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಅನಧಿಕೃತವಾಗಿ ಸಂಚರಿಸುತ್ತಿರುವ ಟ್ಯಾಕ್ಸಿ, ಆಟೋ ಮತ್ತು ಬಾಡಿಗೆ ಬೈಕ್ಗಳ ಕುರಿತಂತೆ ಕಠಿಣ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ.
`ಆಟೋ ರಿಕ್ಷಾಗಳ ನಿಲ್ದಾಣ ಮತ್ತು ಟ್ಯಾಕ್ಸಿಗಳ ನಿಲ್ದಾಣದ ಕುರಿತಂತೆ ಹಾಗೂ ರಿಕ್ಷಾಗಳ ಸಂಚಾರ ವ್ಯಾಪ್ತಿ ವಿಸ್ತರಣೆಯ ಕುರಿತಂತೆ ಸಂಬAಧಪಟ್ಟ ತಾಲೂಕುಗಳ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ತಹಶೀಲ್ದಾರಗಳು, ಪೊಲೀಸ್ ಅಧಿಕಾರಿಗಳು ಹಾಗೂ ಆಟೋ ಮತ್ತು ಟ್ಯಾಕ್ಷಿ ಸಂಘಟನೆಗಳು ಸಭೆ ನಡೆಸಬೇಕು. ಆ ಸಭೆಯಲ್ಲಿ ಸೂಕ್ತ ನಿರ್ಣಯ ಕೈಗೊಂಡು ಕಳುಹಿಸಿದಲ್ಲಿ ಈ ಬಗ್ಗೆ ಅಗತ್ಯ ನಿರ್ಣಯ ಕೈಗೊಳ್ಳಲಾಗುತ್ತದೆ’ ಎಂದವರು ಹೇಳಿದರು. `ಜಿಲ್ಲಾಡಳಿತ ರಿಕ್ಷಾ ಮತ್ತು ಆಟೋ ಚಾಲಕರ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲಿದ್ದು, ಎರಡೂ ಸಂಘಟನೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು’ ಎಂದರು.
`ಗೋವಾದಲ್ಲಿ ಜಿಲ್ಲೆಯ ವಾಹನಗಳ ವಾಯು ಮಾಲಿನ್ಯ ತಪಾಸಣಾ ಪತ್ರಕ್ಕೆ ಮಾನ್ಯತೆ ನೀಡದ ಬಗ್ಗೆ ಗೋವಾದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕ್ಷಕರ ಜೊತೆ ಚರ್ಚಿಸಲಾಗುತ್ತದೆ. ವಾಯು ಮಾಲಿನ್ಯ ತಪಾಸಣಾ ಪತ್ರವನ್ನು ಆನ್ಲೈನ್ ನಲ್ಲಿ ದಾಖಲಿಸುವ ಕುರಿತಂತೆ ರಾಜ್ಯದ ಸಾರಿಗೆ ಆಯುಕ್ತಾಲಯದ ಗಮನಕ್ಕೆ ತರಲಾಗುತ್ತದೆ. ಟ್ಯಾಕ್ಸಿಗಳಲ್ಲಿ ಅಳವಡಿಸಲಾಗುತ್ತಿರುವ ಪ್ಯಾನಿಕ್ ಬಟನ್ ಕಾರ್ಯನಿರ್ವಹಣೆ ಮತ್ತು ಇದಕ್ಕೆ ಸಂಬAಧಿಸಿದ ಸಮಸ್ಯೆಗಳ ಬಗ್ಗೆ ಸಂಬAಧಪಟ್ಟವರೊAದಿಗೆ ಚರ್ಚಿಸಲಾಗುತ್ತದೆ’ ಎಂದವರು ಹೇಳಿದರು.
ರಾಜ್ಯ ಸಾರಿಗೆ ಸಂಸ್ಥೆಯ ಬಸ್ಗಳಿಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ 400 ಕ್ಕೂ ಅಧಿಕ ಮಾರ್ಗಗಳಲ್ಲಿ ಸಂಚರಿಸಲು ಅನುಮತಿಯನ್ನು ನೀಡಿದ ಜಿಲ್ಲಾಧಿಕಾರಿಗಳು, ದುರ್ಗಮ ಪ್ರದೇಶದಲ್ಲಿ ಮತ್ತು ಈಗಾಗಲೇ ಗುರುತಿಸಲಾಗಿರುವ ಬ್ಲಾಕ್ಸ್ಪಾಟ್ ಗಳನ್ನು ಅತ್ಯಂತ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಚಾಲಕರಿಗೆ ಸೂಚನೆ ನೀಡುವಂತೆ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ ಆಟೋ ಮತ್ತು ಟ್ಯಾಕ್ಸಿ ಸಂಘಟನೆಗಳ ಪ್ರತಿನಿಧಿಗಳು ಮತ್ತು ಚಾಲಕರು, `ಹೊಸದಾಗಿ ಆಟೋಗಳಿಗೆ ಪರ್ಮಿಟ್ ನೀಡುವುದನ್ನು ಕನಿಷ್ಠ 5 ವರ್ಷಗಳ ವರೆಗೆ ಸ್ಥಗಿತಗೊಳಿಸಬೇಕು’ ಎಂದು ಮನವಿ ಮಾಡಿದರು. ಎಲ್ ಪಿ ಜಿ ಮತ್ತು ಸಿ ಎನ್ ಜಿ ವಾಹನಗಳಿಗೆ ವಾಯುಮಾಲಿನ್ಯ ಪ್ರಮಾಣ ಪತ್ರದ ಅವಶ್ಯಕತೆ ಬಗ್ಗೆ ಹಾಗೂ ಪರ್ಮಿಟ್ ವ್ಯಾಪ್ತಿ ಉಲ್ಲಂಘಿಸಿ ವಾಹನ ಚಲಾಯಿಸುತ್ತಿರುವ ಬಗ್ಗೆ ಹಾಗೂ ಬಾಡಿಗೆ ಬೈಕ್ ನಿಷೇಧದ ಕುರಿತು ಚರ್ಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಜಾನ್ ಬಿ ಮಿಸ್ಕಿತ್, ಮಲ್ಲಿಕಾರ್ಜುನಪ್ಪ ಕೊಪ್ಪರದ, ರವೀಂದ್ರ ಕೆ.ಎಸ್, ಅವಿನಾಶ ಕಾವೇರಿ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ರಿಕ್ಷಾ ಹಾಗೂ ಟ್ಯಾಕ್ಸಿ ಸಂಘಟನೆಗಳ ಪ್ರತಿನಿಧಿಗಳು ಮತ್ತು ಚಾಲಕರು ಉಪಸ್ಥಿತರಿದ್ದರು.