ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಹೊನ್ನಾವರದಲ್ಲಿ ಜಗಳವಾಗಿದ್ದು, ಇದರಿಂದ ಆಘಾತಕ್ಕೆ ಒಳಗಾದ ಹಡನಬಾಳ ಗ್ರಾ ಪಂ ಅಧಿಕಾರಿಗಳು ಕಚೇರಿಗೆ ಬೀಗ ಹಾಕುವುದನ್ನೇ ಮರೆತು ಮನೆಗೆ ಹೋಗಿದ್ದಾರೆ. ಪರಿಣಾಮ ರಾತ್ರಿಯೂ ಸರ್ಕಾರಿ ಕಚೇರಿ ಬಾಗಿಲು ತೆರೆದಿರುವುದು ಕಾಣಿಸಿದೆ.
`ಕಚೇರಿಯಲ್ಲಿನ ಅವ್ಯವಸ್ಥೆ ಸರಿಪಡಿಸಿ’ ಎಂದು ಆ ಭಾಗದ ಗ್ರಾಮಸ್ಥರು ಒತ್ತಾಯಿಸುತ್ತಿದ್ದರು. ಆದರೆ, ಪಿಡಿಓ ಮಾತ್ರ ಇದಕ್ಕೆ ಸ್ಪಂದಿಸರಲಿಲ್ಲ. ಹೀಗಾಗಿ ಊರಿನ ಜನ ಗ್ರಾಮ ಪಂಚಾಯತ ಕಚೇರಿ ಎದುರು ಪ್ರತಿಭಟಿಸಿದರು. ಇದರಿಂದ ಅಸಮಧಾನಗೊಂಡ ಅಧಿಕಾರಿಗಳು ಸಂಜೆ ಕಚೇರಿಗೆ ಬೀಗ ಹಾಕದೇ ಮನೆಗೆ ಮರಳಿದರು. ಕೆಲ ಕಾಲ ಪ್ರತಿಭಟನೆ ನಡೆಸಿದ ಊರಿನವರು ನಂತರ ಮರಳಿದ್ದು, ರಾತ್ರಿಯೂ ಅಲ್ಲಿ ಬೆಳಕು ಉರಿಯುತ್ತಿರುವುದು ಕಾಣಿಸಿತು. ಅದಾದ ನಂತರ ಪೊಲೀಸ್ ಭದ್ರತೆಯಲ್ಲಿ ಬಂದ ಅಧಿಕಾರಿಗಳು ಬೀಗ ಹಾಕಿ ಹೋಗಿದ್ದಾರೆ.
ಅಕ್ರಮ ಕಾಮಗಾರಿ, ಆಡಳಿತದ ವಿರುದ್ಧ ಅಸಮಧಾನ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಊರಿನವರು ಆಕ್ರೋಶವ್ಯಕ್ತಪಡಿಸಿದ್ದಾರೆ. ದಾಖಲೆ ನೀಡಿದರೂ ಅಕ್ರಮದ ವಿರುದ್ಧ ತನಿಖೆ ನಡೆಸದ ಬಗ್ಗೆ ಕಿಡಿಕಾರಿದ್ದಾರೆ. ಗ್ರಾಮಸಭೆಯನ್ನು ಸರಿಯಾಗಿ ನಡೆಸದ ಬಗ್ಗೆ ಆಕ್ಷೇಪಿಸಿದ್ದಾರೆ. `ನಾಲ್ಕು ಬಾರಿ ಸಭೆ ಕಡೆಯುವಂತೆ ಸೂಚಿಸಿದರೂ ಸಭೆ ಕರೆದಿಲ್ಲ. ಈಗ ಸಭೆ ಮುಗಿದಿದೆ ಎನ್ನುವ ಉತ್ತರ ನೀಡಲಾಗುತ್ತಿದೆ’ ಎಂದು ಜನ ದೂರಿದ್ದಾರೆ.
`ಕಚೇರಿಗೆ ಬಾಗಿಲು ಹಾಕದೇ ಹೋದ ಕಾರಣ ಅಲ್ಲಿ ದಾಖಲೆ ಕಳ್ಳತನ ನಡೆದರೆ ಯಾರು ಹೊಣೆ?’ ಎಂದು ಊರಿನವರು ಪ್ರಶ್ನಿಸಿದ್ದಾರೆ. ಸಿಬ್ಬಂದಿಯ ವರ್ತನೆ ವಿರುದ್ಧ ಜನ ಅಸಮಧಾನಹೊರಹಾಕಿದ್ದಾರೆ.