ಸಾರ್ವಜನಿಕರು ಸರಾಗವಾಗಿ ಓಡಾಡುವ ರಸ್ತೆಗೆ ಅಡ್ಡಲಾಗಿ ಕುಮಟಾದ ಮಿರ್ಜಾನ್ ಗ್ರಾಮ ಪಂಚಾಯತದವರು ಗೇಟ್ ನಿರ್ಮಿಸಿ, ಹಣ ವಸೂಲಿಗೆ ನಿರ್ಧರಿಸಿದ್ದಾರೆ. ಈ ಕ್ರಮದ ವಿರುದ್ಧ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ.
ಕುಮಟಾಗೆ ಸಾಗುವ ಹೆದ್ದಾರಿ ಅಂಚಿನಿAದ ಛತ್ರಕೂರ್ವೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಕಿರಿದಾದ ದಾರಿಯಿದೆ. ಮಿರ್ಜಾನ್ ಗ್ರಾಮ ಪಂಚಾಯತದವರು ಆ ದಾರಿಗೆ ಅಡ್ಡಲಾಗಿ ಗೇಟ್ ನಿರ್ಮಿಸಿ ಅಲ್ಲಿ ಹೋಗಿ-ಬರುವ ವಾಹನಗಳಿಂದ ಟೋಲ್ ವಸೂಲಿ ಮಾಡುವ ಪ್ರಯತ್ನ ಮಾಡಿದ್ದಾರೆ. ಮಿರ್ಜಾನ್ ಕೋಟೆ ವೀಕ್ಷಣೆಗಾಗಿ ನಿತ್ಯ ನೂರಾರು ಜನ ಬರುತ್ತಿದ್ದು, ಅವರಿಂದ ಅಕ್ರಮ ಹಣ ವಸೂಲಿಗೆ ಅಧಿಕಾರಿಗಳೇ ರೂಪುರೇಷೆ ಸಿದ್ಧಪಡಿಸಿದ್ದಾರೆ. ಹಣ ವಸೂಲಿಗೆ ಅನುಕೂಲವಾಗುವಂತೆ ಮಾಡಿಕೊಳ್ಳಲು ಅಲ್ಲಿ ರಸ್ತೆಗೆ ಅಡ್ಡಲಾಗಿ ಗೇಟ್ ಅಳವಡಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವಿಷಯ ಅರಿತ ಊರಿನ ಜನ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.
ಮಿರ್ಜಾನ ಕೋಟೆಯ ಕೆಳಭಾಗದಲ್ಲಿರುವ ಛತ್ರಕೂರ್ವೆ ಗ್ರಾಮಕ್ಕೆ ಅನಾದಿಕಾಲದಿಂದಲೂ ಮಿರ್ಜಾನ ಮೂಲಕ ಕೋಟೆಯ ಮಾರ್ಗವಾಗಿ ಸಾಗುವ ರಸ್ತೆಯೇ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಈ ರಸ್ತೆಯು ಲೋಕೋಪಯೋಗಿ ಇಲಾಖೆಯ ಕುಮಟಾ ಉಪವಿಭಾಗದ ಅಡಿಯಲ್ಲಿ ನಿರ್ವಹಣೆಯಲ್ಲಿದೆ. ಆದರೆ, ಇತ್ತೀಚೆಗೆ ಮಿರ್ಜಾನ ಗ್ರಾಮ ಪಂಚಾಯತ್ ಆಡಳಿತ ಸಮಿತಿಯು ಸಭೆ ನಡೆಸಿ, ಪ್ರವಾಸಿ ವಾಹನಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ಬಗ್ಗೆ ನಿರ್ಧರಿಸಿದ್ದು, ಆ ನಿರ್ಧಾರಕ್ಕೆ ಕಾನೂನು ಮಾನ್ಯತೆಯೇ ಇಲ್ಲ ಎಂಬುದು ಊರಿನವರ ದೂರು.
ಮೇಲಾಧಿಕಾರಿಗಳ ನಿರ್ದೇಶನ ಎಂಬ ತಪ್ಪು ಮಾಹಿತಿ ನೀಡಿ ಗ್ರಾಮ ಪಂಚಾಯತದವರು ಹಣ ವಸೂಲಿಗೆ ಮುಂದಾಗಿದ್ದಾರೆ. ಇಲ್ಲಿ ಗೇಟ್ ಅಳವಡಿಕೆಯಿಂದ ಛತ್ರಕೂರ್ವೆ ಗ್ರಾಮದ ನಿವಾಸಿಗಳಿಗೆ, ನಿತ್ಯ ಓಡಾಡುವ ವಿದ್ಯಾರ್ಥಿಗಳಿಗೆ ಹಾಗೂ ತುರ್ತು ವಾಹನಗಳಿಗೆ ಸಂಚರಿಸಲು ಅಡ್ಡಿಯಾಗುತ್ತದೆ ಎಂಬ ಅರಿವಿದ್ದರೂ ಆ ಬಗ್ಗೆ ಸ್ಥಳೀಯ ಆಡಳಿತ ತಲೆಕೆಡಿಸಿಕೊಂಡಿಲ್ಲ. ಗೇಟ್ ಅಳವಡಿಸಿದರೆ ಕೃತಕವಾಗಿ ವಾಹನ ದಟ್ಟಣೆ ಆಗಲಿದ್ದು, ಕಿರಿದಾದ ರಸ್ತೆಯಲ್ಲಿ ಅಪಘಾತದ ಸಾಧ್ಯತೆಗಳು ಹೆಚ್ಚಿವೆ.
ಈ ಕುರಿತು ಛತ್ರಕೂರ್ವೆ ಗ್ರಾಮದ 50 ಕ್ಕೂ ಹೆಚ್ಚು ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ವಿನಾಯಕ ಪಟಗಾರ, `ಗೇಟ್ ಹಾಕುವುದರಿಂದ ಗ್ರಾಮದ ಜನಜೀವನಕ್ಕೆ ತೊಂದರೆಯಾಗುತ್ತದೆ. ಕೂಡಲೇ ಈ ಕಾಮಗಾರಿ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು. ಇನ್ನೊಬ್ಬ ಮುಖಂಡ ಶಿವಾನಂದ ಮಾತನಾಡಿ `ಒಂದೊಮ್ಮೆ ಪಂಚಾಯತ್ ಹಠಮಾರಿ ಧೋರಣೆ ಮುಂದುವರಿಸಿದರೆ ಗ್ರಾಮಸ್ಥರೆಲ್ಲರೂ ಸೇರಿ ಪಂಚಾಯತ್ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದೇವೆ’ ಎಂದು ಎಚ್ಚರಿಸಿದರು. ಗ್ರಾಮದ ಪ್ರಮುಖರಾದ ರವಿ, ಚೆನ್ನಪ್ಪ, ಲೋಕೇಶ, ಪುರಸಯ್ಯ, ಗಣೇಶ, ನವೀನ, ಓಮು, ಮಹೆಂದ್ರ ಶಾಂತಿ, ದಾಮೋದರ, ಲಕ್ಷಣ, ಗುರುನಾಥ, ರಾಮಚಂದ್ರ ವೆಂಕಟ್ರಮಣ ಇತರರು ಎಚ್ಚರಿಕೆಯ ಸಂದೇಶ ರವಾನಿಸಿದರು.