ಮಗುವಿಗೆ ಜನ್ಮ ನೀಡುವುದಕ್ಕಾಗಿ ದಾಂಡೇಲಿಯ ತವರುಮನೆಗೆ ಬಂದಿದ್ದ ಹೇಮಾವತಿ ತೊಟ್ಟಿನಾಯಕ ಅವರು ಹೃದಯಕ್ಕೆ ಆದ ಆಘಾತದಿಂದ ಸಾವನಪ್ಪಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಧಾರವಾಡದ ಆಸ್ಪತ್ರೆಗೆ ಕರೆದೊಯ್ದರೂ ಬದುಕಿಸಲು ಸಾಧ್ಯವಾಗಲಿಲ್ಲ.
ದಾಂಡೇಲಿ ಗಾಂಧೀನಗರದ ಹೇಮಾವತಿ ಪ್ರೇಮಕುಮಾರ ತೊಟ್ಟಿನಾಯಕ (29) ಅವರನ್ನು ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ ಮದುವೆ ಮಾಡಿಕೊಡಲಾಗಿತ್ತು. ಗರ್ಭಿಣಿ ಆಗಿದ್ದ ಅವರು 9 ತಿಂಗಳ ಹಿಂದೆ ತಮ್ಮ ತವರೂರಿಗೆ ಬಂದಿದ್ದರು. ಮೂರು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ತವರುಮನೆಯವರೇ ಬಾಣಂತಿ ಹಾಗೂ ಮಗುವಿನ ಆರೈಕೆ ಮಾಡುತ್ತಿದ್ದರು.
ಜನವರಿ 31ರಂದು ಎದೆನೋವು ಹೇಮಾವತಿ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಅವರ ಅಕ್ಕ ರಾಮಕ್ಕ ಹಾಗೂ ಭಾವ ಕೃಷ್ಣ ಸೇರಿ ಹೇಮಾವತಿ ಅವರನ್ನು ದಾಂಡೇಲಿ ಆಸ್ಪತ್ರೆಗೆ ದಾಖಲು ಮಾಡಿದರು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಶಿಫಾರಸ್ಸು ಮಾಡಿದರು. ಧಾರವಾಡದ ಆಸ್ಪತ್ರೆಗೆ ಹೋಗುವಾಗಲೇ ಹೇಮಾವತಿ ಅವರು ಕೊನೆಯುಸಿರೆಳೆದರು.
ಧಾರವಾಡದ ಸಿವಿಲ್ ಆಸ್ಪತ್ರೆ ವೈದ್ಯರು ಸಾವನ್ನು ದೃಢಪಡಿಸಿದ್ದು, ಬೆಳಗಾವಿಯ ಖಾನಾಪುರದಲ್ಲಿ ಧರ್ಮಸ್ಥಳ ಸಂಘದಲ್ಲಿ ಕೆಲಸ ಮಾಡುವ ತಿಮ್ಮಕ್ಕ ಲೋಬೋ ಅವರು ಈ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದರು. ದಾಂಡೇಲಿ ಪೊಲೀಸರು ಪ್ರಕರಣ ದಾಖಲಿಸಿದರು.