ಅಂಕೋಲಾದ ರಾಘು ನಾಯ್ಕ ಅವರು ತಮಗೆ ಸ್ನೇಹಿತರಾಗಿದ್ದ ಬೇಲಿಕೇರಿಯ ಅಮರನಾಥ ಭಾನಾವಳಿಕರ್ ಅವರಿಗೆ ಆರ್ಥಿಕ ನೆರವು ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಷ್ಟ ಕಾಲದಲ್ಲಿ ಸಹಾಯ ಮಾಡಿದ ರಾಘು ನಾಯ್ಕ ಅವರಿಗೆ ಆ ಹಣ ಮರಳಿಸುವ ಬದಲು ಅವರ ವಿರುದ್ಧವೇ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
`ಖಾಲಿ ಚೆಕ್ ಹಿಡಿದು ಕಡ್ಡಿ ಆಡಿಸಿದ ಎಜೆಂಟ’ ವರದಿ ಕುರಿತಾಗಿ ರಾಘು ನಾಯ್ಕ ಕಡೆಯವರು ಸ್ಪಷ್ಠನೆ ನೀಡಿದ್ದು, ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ. `ಬೇಲಿಕೇರಿಯ ಅಮರನಾಥ ಭಾನಾವಳಿಕರ್ ಹಾಗೂ ಕೇಣಿ ಕಸಬಾದ ರಾಘು ನಾಯ್ಕ ಅವರು 10 ವರ್ಷ ಹಿಂದಿನ ಸ್ನೇಹಿತರಾಗಿದ್ದರು. ಅಮರನಾಥ ಭಾನಾವಳಿಕರ್ ಅವರು ಸಮಸ್ಯೆಗೆ ಸಿಲುಕಿದ ಕಾರಣ ರಾಘು ನಾಯ್ಕ ಅವರಲ್ಲಿ ಸಹಾಯ ಕೇಳಿದ್ದರು. 15 ಲಕ್ಷ ರೂ ನೆರವು ನೀಡುವಂತೆ ಅಮರನಾಥ ಭಾನಾವಳಿಕರ್ ಅವರು ಕೇಳಿದ್ದು, ರಾಘು ನಾಯ್ಕ ಅವರು ಒಂದೇ ಸಲ ಅಷ್ಟೊಂದು ಹಣ ಕೊಡಲು ಆಗಿರಲಿಲ್ಲ. ಹೀಗಾಗಿ ಹಂತ ಹಂತವಾಗಿ ರಾಘು ನಾಯ್ಕ ಅವರು ಅಮರನಾಥ ಭಾನಾವಳಿಕರ್ ಅವರಿಗೆ ಸಹಾಯ ಮಾಡಿದ್ದರು.
ಒಟ್ಟು 14.70 ಲಕ್ಷ ರೂಪಾಯಿಯನ್ನು ರಾಘು ನಾಯ್ಕ ಅವರು ನೀಡಿದ್ದು, ಏಪ್ರಿಲ್ ತಿಂಗಳಿನಲ್ಲಿ ಅದನ್ನು ಅಮರನಾಥ ಭಾನಾವಳಿಕರ್ ಅವರು ಮರು ಪಾವತಿ ಮಾಡುವ ಭರವಸೆ ನೀಡಿದ್ದರು. ಆದರೆ, ಆ ಹಣವನ್ನು ಕೊಟ್ಟಿರಲಿಲ್ಲ. ಪದೇ ಪದೇ ಕೇಳಿದಾಗ ಏಪ್ರಿಲ್ ಅಂತ್ಯಕ್ಕೆ ಚೆಕ್ ನೀಡಿದ್ದು, ಆ ಚೆಕ್ ಅಮಾನ್ಯವಾಗಿದೆ. ತಂದೆ ಹಾಗೂ ಪತ್ನಿಯ ಭೂಮಿ ಮಾರಾಟದಿಂದ ಬಂದ ಹಣವನ್ನು ರಾಘು ನಾಯ್ಕ ಅವರು ಸ್ನೇಹಿತರಿಗೆ ನೀಡಿದ್ದು, ಫೋನ್ ಮಾಡಿದರೂ ಸಹ ಅಮರನಾಥ ಭಾನಾವಳಿಕರ್ ಅವರಿಂದ ಸ್ಪಂದನೆ ಸಿಕ್ಕಿಲ್ಲ. ತಮ್ಮ ಹಣ ಮರಳದ ಕಾರಣ ರಾಘು ನಾಯ್ಕ ಅವರು ನೋಟಿಸ್ ನೀಡಿದ್ದಾರೆ. ನೋಟಿಸ್ ನೀಡಿದ ಸಿಟ್ಟಿಗೆ ಅಮರನಾಥ ಭಾನಾವಳಿಕರ್ ಅವರು ರಾಘು ನಾಯ್ಕ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ರಾಘು ನಾಯ್ಕ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರಕರಣದಲ್ಲಿ ಅವರದ್ಧು ಏನೂ ತಪ್ಪಿಲ್ಲ’ ಎಂದು ರಾಘು ನಾಯ್ಕ ಅವರ ಆಪ್ತರು ಹೇಳಿದ್ದಾರೆ. ಇದರೊಂದಿಗೆ ರಾಘು ನಾಯ್ಕ ಅವರ ಪರವಾಗಿ ವಕೀಲರು ನೀಡಿದ ನೋಟಿಸ್ ಪ್ರತಿಯನ್ನು ಒದಗಿಸಿದ್ದಾರೆ.
`ಸಾಲ ನೀಡಿ ಸ್ನೇಹ ಕಳೆದುಕೊಳ್ಳಬೇಡಿ’