ಶಿರಸಿ ಅಬಕಾರಿ ಇನ್ಸಪೆಕ್ಟರ್ ಮಂಜುಕುಮಾರ ನಾಯ್ಕ ಹಾಗೂ ದಾಂಡೇಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ವಿನೋದ ಶೆಟ್ಟಿ ಸೇರಿ ಸೆಕ್ಯುರಿಟಿ ಗಾರ್ಡ ಮಂಜುನಾಥ ಮಾದರ್ ಅವರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದಿದ್ದಾರೆ. ಆ ಬ್ಯಾಂಕ್ ಖಾತೆ ಮೂಲಕ ಸಾಲಪಡೆದು ಅದನ್ನು ತೀರಿಸದೇ ವಂಚಿಸಿದ್ದಾರೆ.
ದಾoಡೇಲಿಯ ಜಿ ಎನ್ ರಸ್ತೆಯ ಸಿಎಂಸಿ ಕ್ವಾಟರ್ಸಿನಲ್ಲಿ ಮಂಜುನಾಥ ರಾಜು ಮಾದರ್ ಅವರು ವಾಸವಾಗಿದ್ದಾರೆ. ಅಲ್ಲಿನ ಪೆಪರ್‌ಮಿಲ್ಲಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಸೆಕ್ಯುರಿಟಿ ಗಾರ್ಡ ಆಗಿರುವ ರಾಜು ಮಾದರ್ ಅವರಿಗೆ ಹೆಚ್ಚಿನ ಓದು-ಬರಹ ಗೊತ್ತಿಲ್ಲ. ಇದನ್ನು ಅರಿತ
ಶಿರಸಿ ಅಬಕಾರಿ ಇನ್ಸಪೆಕ್ಟರ್ ಮಂಜುಕುಮಾರ ನಾಯ್ಕ ಹಾಗೂ ದಾಂಡೇಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ವಿನೋದ ಶೆಟ್ಟಿ ಜೊತೆ ಇಲಿಯಾಸ್ ಎಂಬಾತರು ಸೇರಿ ಮಂಜುನಾಥ ಮಾದರ್ ಅವರನ್ನು ವಂಚಿಸಿದ್ದಾರೆ.
2021ರಲ್ಲಿ ಮಂಜುನಾಥ ಮಾದರ್ ಅವರ ಬಳಿ ವಿವಿಧ ಕಾಗದಪತ್ರಗಳ ಮೇಲೆ ಈ ಮೂವರು ಸೇರಿ ಸಹಿ ಹಾಕಿಸಿದ್ದಾರೆ. ಅದಾದ ನಂತರ ಮಂಜುನಾಥ ಮಾದರ್ ಅವರ ಅರಿವಿಗೆ ಬಾರದ ಹಾಗೇ ಆಧಾರ್ ಕಾರ್ಡಪಡೆದಿದ್ದಾರೆ. ಮಂಜುನಾಥ ಮಾದರ್ ಅವರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಅದರ ಮೂಲಕ ಸಾಲಕ್ಕೆ ಅರ್ಜಿ ಹಾಕಿದ್ದಾರೆ. 6.95 ಲಕ್ಷ ರೂ ಸಾಲದ ಹಣ ಮಂಜುನಾಥ ಮಾದರ್ ಅವರ ಖಾತೆಗೆ ಜಮಾ ಆಗಿದ್ದು, ಆ ಹಣವನ್ನು ವಿನೋದ ಶೆಟ್ಟಿ ಅವರು ಇಲಿಯಾಸ್ ಎಂಬಾತರ ಕೈಗೆ ಕೊಟ್ಟಿದ್ದಾರೆ. ಈ ಬಗ್ಗೆ ಮಂಜುನಾಥ ಮಾದರ್ ಅವರು ಪ್ರಶ್ನಿಸಿದಾಗ `ಆ ಹಣವನ್ನು ನಾನು ತುಂಬುತ್ತೇನೆ’ ಎಂದು ಅಬಕಾರಿ ಇನ್ಸಪೆಕ್ಟರ್ ಮಂಜುಕುಮಾರ ನಾಯ್ಕ ಅವರು ಹೇಳಿದ್ದಾರೆ.
ಅದಾದ ನಂತರ ಸಾಲ ಮರುಪಾವತಿ ಆಗದ ಬಗ್ಗೆ ಮಂಜುನಾಥ ಮಾದರ್ ಅವರಿಗೆ ಕೋರ್ಟಿನಿಂದ ನೋಟಿಸ್ ಬಂದಿದೆ. ಆ ವಿಷಯ ಅರಿತ ಮಂಜುಕುಮಾರ ನಾಯ್ಕ ಅವರು ಆ ಅವಧಿಯಲ್ಲಿ 50 ಸಾವಿರ ರೂ ಹಣ ಪಾವತಿ ಮಾಡಿದ್ದಾರೆ. ಅದಾದ ನಂತರ ಮಂಜುನಾಥ ಮಾದರ್ ಅವರಿಗೆ 13.59 ಲಕ್ಷ ರೂ ಪಾವತಿಸಬೇಕು ಎಂಬ ಸಂದೇಶ ಬಂದಿದೆ. ಸಾಲಪಡೆಯದೇ ಇದ್ದರೂ ಹಣ ಪಾವತಿ ಮಾಡಬೇಕಾದ ವಿಷಯ ಅರಿತು ಮಂಜುನಾಥ ಮಾದರ್ ಅವರು ಕಂಗಾಲಾಗಿದ್ದಾರೆ. ಅಬಕಾರಿ ಅಧಿಕಾರಿಗೆ ಫೋನ್ ಮಾಡಿದರೆ ಅವರ ಫೋನ್ ಸ್ವಿಚ್ ಆಫ್ ಆಗಿದೆ.
ಈ ಹಿನ್ನಲೆ ಮಂಜುನಾಥ ಮಾದರ್ ಅವರು ಪೊಲೀಸರ ಮೊರೆ ಹೋಗಿದ್ದು, ತಮಗಾದ ಅನ್ಯಾಯದ ಬಗ್ಗೆ ವಿವರಿಸಿದ್ದಾರೆ. ಪೊಲೀಸರು ಶಿರಸಿ ಅಬಕಾರಿ ಇನ್ಸಪೆಕ್ಟರ್ ಮಂಜುಕುಮಾರ ನಾಯ್ಕ, ದಾಂಡೇಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ವಿನೋದ ಶೆಟ್ಟಿ ಹಾಗೂ ಇಲಿಯಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.