ಸಿದ್ದಾಪುರದಲ್ಲಿ ಅತಿಥಿ ಉಪನ್ಯಾಸಕಿಯಾಗಿರುವ ಜ್ಯೋತಿ ನಾಯ್ಕ ಅವರ ಮೇಲೆ ಅವರ ಕುಟುಂಬದಿoದಲೇ ಅನ್ಯಾಯವಾಗಿದೆ. ಜ್ಯೋತಿ ನಾಯ್ಕ ಅವರ ಪತಿ ಆತ್ಮಹತ್ಯೆಗೆ ಶರಣಾಗಿದ್ದು, ಜ್ಯೋತಿ ನಾಯ್ಕ ಅವರ ಅನಾರೋಗ್ಯ-ಅಸಹಾಯಕತೆಯನ್ನು ಅವರ ಅತ್ತೆ ಹಾಗೂ ನಾದಿನಿ ದುರುಪಯೋಗಪಡಿಸಿಕೊಂಡಿದ್ದಾರೆ.
ಸಿದ್ದಾಪುರದ ಬಾಲಿಕೊಪ್ಪದ ಜ್ಯೋತಿ ಸೋಮಶೇಖರ ನಾಯ್ಕ (35) ಅವರು ಸದ್ಯ ಸುಂಕತ್ತಿಯಲ್ಲಿ ವಾಸವಾಗಿದ್ದಾರೆ. ಅತಿಥಿ ಉಪನ್ಯಾಸಕರಾಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ. 2023ರ ಅವಧಿಯಲ್ಲಿ ಜ್ಯೋತಿ ನಾಯ್ಕ ಅವರ ಪತಿ ಆತ್ಮಹತ್ಯೆಗೆ ಶರಣಾಗಿದ್ದು, ಅದಾದ ನಂತರ ಜ್ಯೋತಿ ನಾಯ್ಕ ಅವರ ಜೊತೆ ಅವರ ಮಗಳ ಬದುಕು ಶೋಚನೀಯ ಸ್ಥಿತಿ ತಲುಪಿದೆ. ಜ್ಯೋತಿ ನಾಯ್ಕ ಅವರ ಅತ್ತೆ ಬಾಲಿಕೊಪ್ಪದ ಸರೋಜಾ ಹನುಮಂತ ನಾಯ್ಕ, ಬೆಳಟ್ಟೆಯಲ್ಲಿರುವ ನಾದಿನಿ ದಿವ್ಯಾ ರಾಘವೇಂದ್ರ ನಾಯ್ಕ ಹಾಗೂ ನಾದಿನಿಯ ಗಂಡ ರಾಘವೇಂದ್ರ ನಾಯ್ಕ ಸೇರಿ ಜ್ಯೋತಿ ನಾಯ್ಕ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಊಟ-ವಸತಿ-ಬಟ್ಟೆಯನ್ನು ಸಹ ನೀಡದೇ ಅವರು ಸತಾಯಿಸುತ್ತಿದ್ದಾರೆ. ಜ್ಯೋತಿ ನಾಯ್ಕ ಅವರ ಮಗಳಿಗೆ ನೆರವು ನೀಡುವುದಾಗಿ ಹೇಳಿದ್ದರೂ, ಅವರಿಗೆ ಸಹಾಯ ಮಾಡಿಲ್ಲ.
ಗಂಡನ ಸಾವಿನಿಂದ ನೊಂದಿದ್ದ ಜ್ಯೋತಿ ನಾಯ್ಕ ಅವರ ಮೇಲೆ ಆ ಮೂವರು ದಬ್ಬಾಳಿಕೆ ನಡೆಸಿದ್ದು, ರಾಜಿ ಮೂಲಕ ಅದು ಒಮ್ಮೆ ಬಗೆಹರಿದಿತ್ತು. ಅದಾದ ನಂತರವೂ ಆ ಮೂವರು ನಿರಂತರ ಹಿಂಸೆ ನೀಡಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಚರ್ಚೆ ನಡೆದಿತ್ತು. ಆ ವೇಳೆ ಎದುರುದಾರರು ಜ್ಯೋತಿ ನಾಯ್ಕ ಹಾಗೂ ಅವರ ಪುತ್ರಿಯನ್ನು ಚನ್ನಾಗಿ ನೋಡಿಕೊಳ್ಳುತ್ತೇವೆ’ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೆ, ಅವರೇ ಬರೆದುಕೊಟ್ಟ ವಿಷಯವನ್ನು ಪಾಲಿಸಿರಲಿಲ್ಲ. ಅದಾದ ನಂತರ ಜ್ಯೋತಿ ನಾಯ್ಕ ಅವರ ಪತಿ ಮನೆಯಲ್ಲಿನ ಜಮೀನನ್ನು ಮೂರು ಭಾಗ ಮಾಡಿ ಒಂದು ಭಾಗವನ್ನು ಜ್ಯೋತಿ ನಾಯ್ಕ ಅವರಿಗೆ ನೀಡುವ ಬಗ್ಗೆ ನಿರ್ಧರಿಸಲಾಗಿದ್ದು, ತಮ್ಮ ಪಾಲನ್ನು ಅವರುಪಡೆದಿದ್ದರು.
ಜ್ಯೋತಿ ನಾಯ್ಕ ಅವರ ಹಕ್ಕಿಗೆ ಬಂದ ಜಾಗವನ್ನು ಇದೀಗ ರಾಘವೇಂದ್ರ ನಾಯ್ಕ, ದಿವ್ಯಾ ನಾಯ್ಕ ಹಾಗೂ ಸರೋಜಾ ನಾಯ್ಕ ಸೇರಿ ಧ್ವಂಸ ಮಾಡಿದ್ದಾರೆ. ಅಲ್ಲಿ ಫಸಲು ಬರುತ್ತಿದ್ದ ಅಡಿಕೆ ಮರಗಳನ್ನು ಕಡಿದಿದ್ದಾರೆ. ಜೆಸಿಬಿ ಯಂತ್ರಗಳನ್ನು ಓಡಿಸಿ ಆ ಭೂಮಿಯನ್ನು ನೆಲಸಮ ಮಾಡಿದ್ದಾರೆ. ಅನಾರೋಗ್ಯದ ಕಾರಣ ಮೂರು ತಿಂಗಳು ತವರು ಮನೆಯಲ್ಲಿದ್ದ ಜ್ಯೋತಿ ನಾಯ್ಕ ಅವರು ಈಚೆಗೆ ತಮ್ಮ ತೋಟ ನೋಡಲು ಹೋಗಿ ಆಘಾತಕ್ಕೆ ಒಳಗಾಗಿದ್ದಾರೆ. ಅಲ್ಲಿದ್ದ ಅಡಿಕೆ ಮರಗಳು ಕಾಣದ ಬಗ್ಗೆ ರಾಘವೇಂದ್ರ ನಾಯ್ಕ ಅವರಿಗೆ ಫೋನ್ ಮಾಡಿದ್ದು, `ಆ ಜಾಗ ನನ್ನ ಮಾವನದು. ಇಲ್ಲಿ ನಿನಗೆ ಹಕ್ಕಿಲ್ಲ’ ಎಂದು ದಬಾಯಿಸಿದ್ದಾರೆ. `ಈ ಜಾಗದಲ್ಲಿ ಬಿಡಿಗಾಸು ಕೊಡುವುದಿಲ್ಲ’ ಎಂದು ಅತ್ತೆ ಸರೋಜಾ ನಾಯ್ಕ ಹಾಗೂ ನಾದಿನಿ ದಿವ್ಯಾ ನಾಯ್ಕ ಅವರು ಕೂಗಾಟ ನಡೆಸಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ಜ್ಯೋತಿ ನಾಯ್ಕ ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದಾರೆ. ಗಂಡನ ಮನೆಯವರಿಂದಲೇ ಆಗುತ್ತಿರುವ ಅನ್ಯಾಯದ ಬಗ್ಗೆ ಅವರು ವಿವರಿಸಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.