ಭಟ್ಕಳದ ಮನೆಯೊಂದರ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಅಲ್ಲಿ ದಾಸ್ತಾನು ಮಾಡಿದ್ದ ಜಿಂಕೆ ಮಾಂಸವನ್ನು ಜಪ್ತು ಮಾಡಿದ್ದಾರೆ.
ಭಟ್ಕಳದ ಹುರುಳಿಸಾಲದ ಮನೆಯಲ್ಲಿ 21 ಕೆಜಿ ಮಾಂಸ, ಜಿಂಕೆ ಕೊಬ್ಬು ಹಾಗೂ ಎರಡು ಏರ್‌ಗನ್ ಸಿಕ್ಕಿದೆ. ಜಾಫರ್ ಬ್ರಹ್ಮಾವರ ಎಂಬಾತ ಕಾಡಿನಲ್ಲಿ ಪ್ರಾಣಿಯನ್ನು ಹತ್ಯೆ ಮಾಡಿ ಮಾಂಸವನ್ನು ಮನೆಯ ಪಕ್ಕದಲ್ಲಿ ಬೇರ್ಪಡಿಸುತ್ತಿದ್ದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಸಿಕ್ಕಿತು. ಪ್ರಾಣಿಯ ಅವಶೇಷಗಳನ್ನು ಮನೆಯ ಪಕ್ಕದಲ್ಲಿದ್ದ ಪಾಳುಬಿದ್ದ ಬಾವಿಗೆ ಎಸೆದಿರುವ ಬಗ್ಗೆಯೂ ದೂರು ಬಂದಿತ್ತು. ಈ ಹಿನ್ನಲೆ ದಾಳಿ ಮಾಡಿದ ಅಧಿಕಾರಿಗಳು ಮನೆಯಲ್ಲಿದ್ದ ಮಾಂಸದ ಜೊತೆ ಬಾವಿಯಲ್ಲಿದ್ದ ಅವಶೇಷಗಳನ್ನು ಹೊರ ತೆಗೆದಿದ್ದಾರೆ.
ಮನೆ ಒಳಗೆ ಶೋಧಕ್ಕೆ ಮುಂದಾದ ಅಧಿಕಾರಿಗಳಿಗೆ ಮನೆಯವರು ಸಹಕಾರ ನೀಡಲಿಲ್ಲ. ಮನೆ ಬಾಗಿಲನ್ನು ಸಹ ತೆರೆಯಲಿಲ್ಲ. ಅದಾಗಿಯೂ, ಆರು ಗಂಟೆಗಳ ಕಾಲ ಅಧಿಕಾರಿಗಳು ಕಾದು ಬಾಗಿಲು ತೆರೆಸಿದರು. ನಂತರ ನಡೆದ ಪರಿಶೀಲನೆಯಲ್ಲಿ ಫ್ರಿಡ್ಜಿನ ಒಳಗೆ ಸಂಗ್ರಹಿಸಿದ್ದ 21 ಕೆಜಿ ಮಾಂಸ ಪತ್ತೆಯಾಯಿತು. ಜೊತೆಗೆ ಜಿಂಕೆ ಕೊಬ್ಬು ಹಾಗೂ ಎರಡು ಏರ್‌ಗನ್ ಸಹ ಮನೆಯಲ್ಲಿ ಕಾಣಿಸಿತು.
`ಜಿಂಕೆ ಜೊತೆ ಕಾಡು ಕೋಣದ ಮಾಂಸವೂ ಮಿಶ್ರಣವಾಗಿರುವ ಸಾಧ್ಯತೆಯಿದೆ. ವಿಧಿ ವಿಜ್ಞಾನದ ಪ್ರಯೋಗಾಕಯಕ್ಕೆ ಮಾಂಸ ಕಳುಹಿಸಿದ್ದು, ವರದಿಗೆ ಕಾಯಲಾಗುತ್ತಿದೆ’ ಎಂದು ಅರಣ್ಯಾಧಿಕಾರಿ ವಿಶ್ವನಾಥ ಅವರು ಮಾಹಿತಿ ನೀಡಿದರು. ಆರೋಪಿ ಪರಾರಿಯಾಗಿದ್ದು, ಶೋಧ ಮುಂದುವರೆದಿದೆ. ನಗರ ಠಾಣೆ ಸಿಪಿಐ ದಿವಾಕರ ಪಿ ಎಂ, ಪಿಸೈ ನವೀನ ನಾಯ್ಕ, ಗ್ರಾಮೀಣ ಠಾಣೆ ಪಿಸೈ ಮಲ್ಲಿಕಾರ್ಜುನ, ಡಿಆರ್‌ಒಎಫ್ ಮಾರುತಿ, ಸಂದೀಪ್ ಸೇರಿದಂತೆ ಧನಂಜಯ ಮೊಗೇರ ಸಹ ಕಾರ್ಯಾಚರಣೆಯಲ್ಲಿದ್ದರು.