ಕುಮಟಾದ ಹೊಲನಗದ್ದೆ ಗ್ರಾಮ ಪಂಚಾಯತ ಪಿಡಿಓ ಪ್ರಜ್ಞಾ ನಾಯ್ಕ ಅವರು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ಅನಿತಾ ಡಿಸೋಜಾ ಅವರ ಮೊಬೈಲ್ ನಂ ಬ್ಲಾಕ್ ಮಾಡಿದ್ದಾರೆ. ಊರಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರೂ ಸ್ಪಂದಿಸದೇ ಫೋನ್ ನಂ ಬ್ಲಾಕ್ ಮಾಡಿದ ಕಾರಣ ಪಿಡಿಓ ವಿರುದ್ಧ ಅನಿತಾ ಡಿಸೋಜಾ ಅವರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ.
`ಆರು ತಿಂಗಳ ಹಿಂದೆ ಕುಮಟಾ ಮಾಸೂರು ಕ್ರಾಸಿನಲ್ಲಿ ಮನೆ ಮನೆಗೂ ನಲ್ಲಿ ನೀರಿನ ಸಂಪರ್ಕ ಕೊಡಲಾಗಿದೆ. ಆದರೆ, ಜಲ ಜೀವನ ಮಿಶನ್ ಯೋಜನೆ ಅಡಿ ನೀರು ಒದಗಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದ ಕಾರಣ ಪಿಡಿಓ ಪ್ರಜ್ಞಾ ನಾಯ್ಕ ಅವರು ಫೋನ್ ನಂ ಬ್ಲಾಕ್ ಮಾಡಿದ್ದಾರೆ’ ಎಂದು ಅನಿತಾ ಡಿಸೋಜಾ ಅವರು ಆಕ್ರೋಶವ್ಯಕ್ತಪಡಿಸಿದರು. `ಗ್ರಾಮ ಪಂಚಾಯತದ ಫೋನ್ ನಂ ಕೆಲಸ ಮಾಡುತ್ತಿಲ್ಲ. ಪಿಡಿಓ ಫೋನಿಗೆ ಸಿಗುತ್ತಿಲ್ಲ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಹಾಗೇ ಇದ್ದು, ಮೇಲಧಿಕಾರಿಗಳಿಗೂ ಸಹ ಪಿಡಿಓ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ದೂರಿದರು.
`ಸದ್ಯ ತಾನು ಭಟ್ಕಳದ ಬೈಲೂರಿನ ಅತ್ತೆ ಮನೆಯಲ್ಲಿ ವಾಸವಾಗಿದ್ದೇನೆ. ಅದೇ ಕಾರಣ ನೀಡಿ ಇಲ್ಲಿರುವ ಮನೆಗೆ ನೀರು ಸರಬರಾಜು ಮಾಡುತ್ತಿಲ್ಲ. ಈ ಹಿಂದೆ ಗ್ರಾ ಪಂ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದು, ಎಲ್ಲರಿಗೂ ಕೊಟ್ಟ ಹಾಗೇ ನನಗೂ ನೀರು ಒದಗಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ’ ಎಂದವರು ಎಚ್ಚರಿಸಿದ್ದಾರೆ. `ಮನೆ ತೆರಿಗೆ ಪಾವತಿಸಿದರೂ ನೀರು ಒದಗಿಸದಿರುವುದು ಅಪರಾಧ. ಈ ಬಗ್ಗೆ ಪಂಚಾಯತ್ ರಾಜ್ ಸಚಿವರಿಗೆ ಸಹ ದೂರು ನೀಡಲಾಗುತ್ತದೆ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ಹೇಳಿದ್ದಾರೆ.