ಸಿದ್ದಾಪುರದ ಹೆಸ್ಕಾಂ ಕಚೇರಿ ಪವರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಮಹಾಕೂಟೇಶ್ವರ ಗಾಜಿ ಅವರ ಮೊಬೈಲ್ ಕಾಣೆಯಾಗಿದ್ದು, ಅದಾದ ಕೆಲ ದಿನದಲ್ಲಿ ಮಹಾಕೂಟೇಶ್ವರ ಗಾಜಿ ಅವರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಕಳೆದ 25 ದಿನಗಳಿಂದ ಹುಡುಕಾಟ ನಡೆಸಿದರೂ ಮಹಾಕೂಟೇಶ್ವರ ಗಾಜಿ ಅವರ ಸುಳಿವು ಸಿಕ್ಕಿಲ್ಲ.
ಗದಗದ ರೋಣ ಬಳಿಯ ಮಲ್ಲಾಪುರ ಮೂಲದ ಮಹಾಕೂಟೇಶ್ವರ ಯಲ್ಲಪ್ಪ ಗಾಜಿ (35) ಅವರು ಹೆಸ್ಕಾಂ ನೌಕರರಾಗಿದ್ದರು. ಸಿದ್ದಾಪುರದಲ್ಲಿ ಜೂನಿಯರ್ ಪವರ್ ಮ್ಯಾನ್ ಆಗಿ ಅವರು ಕೆಲಸ ಮಾಡಿಕೊಂಡಿದ್ದರು. ಅಲ್ಲಿನ ಹೆಸ್ಕಾಂ ವಸತಿ ನಿಲಯದಲ್ಲಿ ಅವರು ಒಬ್ಬರೇ ವಾಸವಾಗಿದ್ದರು. ಇನ್ನೂ ಮದುವೆ ಆಗಿರದ ಮಹಾಕೂಟೇಶ್ವರ ಗಾಜಿ ಅವರು ಮದ್ಯ ಸೇವನೆಯ ದುಶ್ಚಟವನ್ನು ಹೊಂದಿದ್ದರು.
ಫೆಬ್ರವರಿ 1ರಂದು ಮಹಾಕೂಟೇಶ್ವರ ಗಾಜಿ ಅವರು ತಮ್ಮ ಸಹೋದರ ಹನಮಪ್ಪ ಗಾಜಿ ಅವರಿಗೆ ಫೋನ್ ಮಾಡಿದ್ದರು. `ನನ್ನ ಮೊಬೈಲ್ ಕಳೆದುಹೋಗಿದೆ. ತುರ್ತಾಗಿ ಹಣದ ಅಗತ್ಯವಿದೆ’ ಎಂದು ಅವರು ಆ ವೇಳೆ ಹೇಳಿದ್ದರು. ಅದಾದ ಬಳಿಕ ಅವರ ಫೋನ್ ಸ್ವಿಚ್ ಆಫ್ ಆಗಿದ್ದು, ಎಷ್ಟು ದಿನ ಕಳೆದರೂ ಮತ್ತೆ ಮಹಾಕೂಟೇಶ್ವರ ಗಾಜಿ ಅವರ ಫೋನ್ ಬಂದಿಲ್ಲ. ಅದಾದ ನಂತರ ಮಹಾಕೂಟೇಶ್ವರ ಗಾಜಿ ಅವರು ಸಹ ಕಣ್ಮರೆಯಾಗಿರುವುದು ಗಮನಕ್ಕೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಮೆಸ್ಕಾಂ ನೌಕರರಾಗಿರುವ ಹನಮಪ್ಪ ಗಾಜಿ ಅವರು ಸಿದ್ದಾಪುರಕ್ಕೆ ಬಂದು ಸಹೋದರನ ಹುಡುಕಾಟ ನಡೆಸಿದರು. ಕಚೇರಿಗೆ ಹೋಗಿ ವಿಚಾರಿಸಿದರು. ಆಗ, ಅವರು ಕೆಲಸಕ್ಕೂ ಬಾರದ ಬಗ್ಗೆ ಗೊತ್ತಾಯಿತು. ಈ ಹಿನ್ನಲೆ ಸಹೋದರನನ್ನು ಹುಡುಕಿಕೊಡುವಂತೆ ಹನಮಪ್ಪ ಗಾಜಿ ಅವರು ಪೊಲೀಸ್ ದೂರು ನೀಡಿದರು. ಸಿದ್ದಾಪುರ ಪೊಲೀಸರು ಸದ್ಯ ಮಹಾಕೂಟೇಶ್ವರ ಗಾಜಿ ಅವರ ಹುಡುಕಾಟ ನಡೆಸಿದ್ದಾರೆ.