ಅಘನಾಶಿನಿ – ವರದಾ ನದಿ ಜೋಡಣೆಯ ವಿರುದ್ಧ ಸಿದ್ದಾಪುರದ ಜನ ಸಿಡಿದೆದ್ದಿದ್ದಾರೆ. ನದಿ ನೀರಿನಲ್ಲಿ ನಿಂತು ಅವರು ಪ್ರತಿಭಟನೆ ಮಾಡಿದ್ದಾರೆ. ಯೋಜನೆ ವಿರುದ್ಧ ನಡೆದ ಜನ ಜಾಗೃತಿಗೂ ಸಾವಿರಾರು ಜನ ಭಾಗವಹಿಸಿ ಅವೈಜ್ಞಾನಿಕ ನೀತಿ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಸಿದ್ದಾಪುರದ ಗೋಳಿಮಕ್ಕಿ ನದಿ ತಿರುವು ಯೋಜನೆ ವಿರುದ್ಧ ಜನಾಂದೋಲನ ನಡೆಯಿತು. ಬಾಳೆಕೊಪ್ಪ ಗ್ರಾಮದ ಅಘನಾಶಿನಿ ಹರಿಯುವ ಗೇಜ್ಕಟ್ಟ ನದಿಯವರೆಗೆ ಪಾದಯಾತ್ರೆ ಮಾಡಿದ ಜನ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಯೋಜನೆ ವಿರುದ್ಧ ತಮ್ಮ ನಿಲುವು ಪ್ರಕಟಿಸಿದರು. `ರಾಷ್ಟಿಯ ಯೋಜನೆಗಳಿಗೆ ಜನ ವಿರೋಧ ವ್ಯಕ್ತಪಡಿಸಿದಾಗಲೂ ಸರ್ಕಾರ 64,354 ಹೇಕ್ಟರ್ ಅರಣ್ಯ ಭೂಮಿ ಒದಗಿಸುತ್ತದೆ. ಆದರೆ, 80 ಸಾವಿರ ಕುಟುಂಬಗಳಿಗೆ ವಾಸ್ತವ್ಯ ಮತ್ತು ಸಾಗುವಳಿಗಾಗಿ 53 ಸಾವಿರ ಎಕರೆ ಸಾಗುವಳಿ ಹಕ್ಕು ನೀಡಲು ಹಿಂಜರಿಯುತ್ತಿದೆ’ ಎಂಬ ವಿಷಯ ಇಂದಿನ ಮುಖ್ಯ ವಿಷಯವಾಗಿತ್ತು.
`ಅಘನಾಶಿನಿ ನದಿಯನ್ನು ಯೋಜನೆಗೆ ಬಿಡುವುದಿಲ್ಲ. ಹೋರಾಟ ಮಾಡಿ ನದಿ ಉಳಿಸಿಕೊಳ್ಳುತ್ತೇವೆ’ ಎಂದು ಜನ ನದಿ ನೀರು ಮುಟ್ಟಿ ಪ್ರತಿಜ್ಞೆ ಮಾಡಿದರು. ಅಘನಾಶಿನಿ ನದಿವರೆಗೂ ಹೋರಾಟಗಾರರು ಹೋರಾಟದ ಭಾವುಟ ಪ್ರದರ್ಶಿಸಿದರು. ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಹೋರಾಟಕ್ಕೆ ಸದಾ ಜೊತೆಯಾಗಿರುವುದಾಗಿ ಘೋಷಿಸಿದರು.