ಶಿವರಾತ್ರಿ ಆಚರಣೆಗೆ ಗೋಕರ್ಣಕ್ಕೆ ಬಂದಿದ್ದ ಭಕ್ತರೊಬ್ಬರು ಏಕಾಏಕಿ ಅಸ್ವಸ್ಥರಾಗಿದ್ದು, ವೈದ್ಯಾಧಿಕಾರಿ ಡಾ ಜಗದೀಶ ನಾಯ್ಕ ಅವರು ಆ ಭಕ್ತರ ಜೀವ ಕಾಪಾಡಿದ್ದಾರೆ.
ಭಾನುವಾರ ಗೋಕರ್ಣದಲ್ಲಿರುವ ಆತ್ಮಲಿಂಗ ದರ್ಶನಕ್ಕೆ ಸಾವಿರ ಸಾವಿರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಪಡೆಯುತ್ತಿದ್ದಾರೆ. ದೂರ ದೂರದ ಊರುಗಳಿಂದ ಆಗಮಿಸಿದ ಜನ ಆತ್ಮಲಿಂಗ ದರ್ಶನಕ್ಕಾಗಿ ದಿನವಿಡೀ ಕಾಯುತ್ತಿದ್ದಾರೆ.
ಹೀಗಿರುವಾಗ ಪರ ಪ್ರದೇಶದ ಭಕ್ತರೊಬ್ಬರು ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಿದ್ದು, ಅನಾರೋಗ್ಯಕ್ಕೆ ಒಳಗಾದರು. ಅಂಕೋಲಾ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿರುವ ಡಾ ಜಗದೀಶ ನಾಯ್ಕ ಅವರು ಗೋಕರ್ಣದಲ್ಲಿ ಪ್ರಭಾರಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದು, ಅಸ್ವಸ್ಥಗೊಂಡ ಆ ಭಕ್ತರ ಆರೈಕೆ ಮಾಡಿದರು. ವೈದ್ಯರ ಸಮಯ ಪ್ರಜ್ಞೆ ಹಾಗೂ ನಿರಂತರ ಚಿಕಿತ್ಸೆ ಪರಿಣಾಮ ಅಸ್ವಸ್ಥಗೊಂಡ ವ್ಯಕ್ತಿ ಜೀವಾಪಾಯದಿಂದ ಪಾರಾದರು. ಡಾ ವಿಶ್ವಾಸ್ ಕಗಾಲ್ ಅವರು ರೋಗಿಗೆ ಚಿಕಿತ್ಸೆ ನೀಡುವಲ್ಲಿ ಸಾಕಷ್ಟು ಶ್ರಮವಹಿಸಿದರು. ಆಸ್ಪತ್ರೆ ಸಿಬ್ಬಂದಿಯೂ ಮುತುವರ್ಜಿವಹಿಸಿ ಆರೈಕೆ ಮಾಡಿದರು.
ಮಿನಿ ಆಂಬುಲೆನ್ಸ್ ಸೇವೆಗೆ ಆಗ್ರಹ:
ಈ ದಿನ ಆತ್ಮಲಿಂಗ ದರ್ಶನ ಮಾಡಿದ ಭಕ್ತರೊಬ್ಬರು ಹೃದಯಘಾತದಿಂದ ಕುಸಿದು ಬಿದ್ದಿದ್ದು, ಅವರನ್ನು ಪೊಲೀಸ್ ವಾಹನದಲ್ಲಿ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಜಾತ್ರೆ ಸಮಯದಲ್ಲಿ ತುರ್ತು ಸನ್ನಿವೇಶ ಎದುರಿಸಲು ಮಿನಿ ಆಂಬುಲೆನ್ಸ ಅಗತ್ಯವಿರುವ ಬಗ್ಗೆ ಜಾತ್ರಾ ಸಿದ್ಧತಾ ಸಭೆಯಲ್ಲಿ ತಿಳಿಸಿದರೂ ಆಗದ ಬಗ್ಗೆ ಅನೇಕ ಜನ ಆಕ್ಷೇಪಿಸಿದರು. ಬೇಡಿಕೆಯ ಪ್ರಕಾರ ಮಿನಿ ಆಂಬುಲೆನ್ಸ್ ಸೇವೆಗಾಗಿ ಒತ್ತಾಯಿಸಿದರು.