ಶಿರಸಿ ಜಾತ್ರೆ ಹಿನ್ನಲೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಯಶವಂತಪುರ – ತಾಳಗುಪ್ಪ ನಡುವೆ ವಿಶೇಷ ರೈಲು ಓಡಿಸಿದ್ದಾರೆ. ಮಾರಿಕಾಂಬಾ ದೇವಿಯ ಭಕ್ತರ ಅನುಕೂಲಕ್ಕಾಗಿ ಈ ವಿಶೇಷ ರೈಲು ಓಡಾಟ ಶುರು ಮಾಡಿಸಿರುವುದಾಗಿ ಕಾಗೇರಿ ಅವರು ಹೇಳಿದ್ದಾರೆ.
ಶಿರಸಿ ಜಾತ್ರೆಗೆ ಲಕ್ಷಕ್ಕೂ ಅಧಿಕ ಜನ ಬರುತ್ತಾರೆ. ಬೇರೆ ಬೇರೆ ಪ್ರದೇಶಗಳ ಭಕ್ತರು ಇಲ್ಲಿಗೆ ಆಗಮಿಸಲಿದ್ದು, ಅವರಿಗೆ ಅಗತ್ಯವಿರುವ ವಾಹನ ಸೌಕರ್ಯ ಸಮಸ್ಯೆ ಮೊದಲಿನಿಂದಲೂ ಇದೆ. ಈ ಹಿನ್ನಲೆ ಬೆಂಗಳೂರಿನ ಭಕ್ತರಿಗಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದಾರೆ. ಭಕ್ತರ ಸುಗಮ ಪ್ರಯಾಣಕ್ಕಾಗಿ ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ ಮತ್ತು ಸಾಗರದ ತಾಳಗುಪ್ಪ ನಡುವೆ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ.
ಅದರಂತೆ, ಫೆಬ್ರವರಿ 27 ಮತ್ತು 28ರಂದು ಈ ವಿಶೇಷ ರೈಲು ಸೇವೆ ಲಭ್ಯವಿರಲಿದೆ. ಅದರ ಪ್ರಕಾರ ರೈಲು ಸಂಖ್ಯೆ 06587ಯೂ ಫೆಬ್ರವರಿ 27ರ ಶುಕ್ರವಾರ ರಾತ್ರಿ 10:45ಕ್ಕೆ ಯಶವಂತಪುರದಿAದ ಹೊರಟು ಮರುದಿನ ಮುಂಜಾನೆ 05:05ಕ್ಕೆ ತಾಳಗುಪ್ಪ ತಲುಪಲಿದೆ. ರೈಲು ಸಂಖ್ಯೆ 06588ಯೂ ಫೆಬ್ರವರಿ 28ರ ಶನಿವಾರ ಬೆಳಿಗ್ಗೆ 09:30ಕ್ಕೆ ತಾಳಗುಪ್ಪದಿಂದ ಹೊರಟು ಅದೇ ದಿನ ಸಂಜೆ 05:15ಕ್ಕೆ ಯಶವಂತಪುರವನ್ನು ತಲುಪಲಿದೆ. ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಯಶವಂತಪುರ-ಶಿವಮೊಗ್ಗ ಟೌನ್ ನಡುವೆ ಸಂಚರಿಸುವ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ ರೈಲನ್ನು (16581/16582) ಸಹ ತಾತ್ಕಾಲಿಕವಾಗಿ ತಾಳಗುಪ್ಪದವರೆಗೆ ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ಮಾರ್ಚ್ 1ರ ಭಾನುವಾರದಂದು ಯಶವಂತಪುರದಿoದ ಮಧ್ಯರಾತ್ರಿ 12:15ಕ್ಕೆ ಹೊರಡುವ ರೈಲು ಸಂಖ್ಯೆ 16581 ಶಿವಮೊಗ್ಗದ ಬದಲಾಗಿ ಬೆಳಿಗ್ಗೆ 9 ಗಂಟೆಗೆ ತಾಳಗುಪ್ಪ ತಲುಪಲಿದ್ದು, ಅದೇ ದಿನ ರಾತ್ರಿ 10 ಗಂಟೆಗೆ ತಾಳಗುಪ್ಪದಿಂದಲೇ ತನ್ನ ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 16582 ಮರುದಿನ ಬೆಳಿಗ್ಗೆ 4:45ಕ್ಕೆ ಯಶವಂತಪುರ ತಲುಪಲಿದೆ. ಶಿರಸಿ ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರ ಹಿತದೃಷ್ಟಿಯಿಂದ ವಿಶೇಷ ರೈಲು ಸೌಲಭ್ಯ ಒದಗಿಸುವಂತೆ ಕೇಂದ್ರ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪತ್ರ ಬರೆದಿದ್ದು, ಅದಕ್ಕೆ ಮನ್ನಣೆ ನೀಡಿ ರೈಲು ಸೇವೆ ಒದಗಿಸಲಾಗಿದೆ.