ಸಿದ್ದಾಪುರದ ಅಥರ್ವ ಸೊಸೈಟಿ ಹಾಗೂ ಶಿರಸಿಯ ಶ್ರೀಮಾತಾ ಸೊಸೈಟಿಯಲ್ಲಿ ಸಾಲ ಮಾಡಿದ್ದ ಸಂದೀಪ ಪಲ್ಲೇದ್ ಅವರು ಸಾಲದ ಹೊರೆ ಸಹಿಸಲಾಗದೇ ಸಾವನಪ್ಪಿದ್ದಾರೆ.
ಸಿದ್ದಾಪುರದ ಬಸವನಗಲ್ಲಿಯ ಸಂದೀಪ ಮುರಿಗಪ್ಪಾ ಪಲ್ಲೇದ್ (45) ಅವರು ವಾಸವಾಗಿದ್ದರು. ಕೃಷಿಕರಾಗಿದ್ದ ಅವರು ಕೃಷಿ ಜೊತೆ ಕೋಲ್ಡ್ ಡ್ರಿಂಕ್ಸ್ ವ್ಯಾಪಾರವನ್ನು ಶುರು ಮಾಡಿದ್ದರು. ಸಂದೀಪ ಪಲ್ಲೇದ ಅವರ ಪತ್ನಿ ಮಂಜುಳಾ ಪಲ್ಲೇದ್ ಅವರು ಅತಿಥಿ ಶಿಕ್ಷಕರಾಗಿ ದುಡಿಯುತ್ತಿದ್ದರು. ಆದರೆ, ಅವರಿಬ್ಬರ ದುಡಿಮೆಯಿಂದ ಕುಟುಂಬ ನಿರ್ವಹಣೆ ಸಾಧ್ಯವಾಗಿರಲಿಲ್ಲ.
ಹೀಗಾಗಿ ಕವಂಚೂರು ಗ್ರಾಮದಲ್ಲಿದ್ದ ಗದ್ದೆಯನ್ನು ತೋಟವನ್ನಾಗಿ ಪರಿವರ್ತಿಸಲು ್ಲ ಸಂದೀಪ ಪಲ್ಲೇದ್ ಅವರು ನಿರ್ಧರಿಸಿದರು. ಇದಕ್ಕಾಗಿ ಅವರು ಅಲ್ಲಲ್ಲಿ ಕೈಗಡ ಸಾಲಪಡೆದರು. ಕೋಲ್ಡ್ ಡ್ರಿಂಕ್ಸ ಜೊತೆ ನೀರಿನ ಬಾಟಲಿ ವ್ಯಾಪಾರ ವೃದ್ಧಿಗಾಗಿಯೂ ಅವರು ಇನ್ನಷ್ಟು ಸಾಲ ಸ್ವೀಕರಿಸಿದರು. ಇದರೊಂದಿಗೆ ಅಡಿಕೆ ಸಸಿ ನಾಟಿ, ಮಣ್ಣು ಹಾಕಿಸುವಿಕೆ ಸೇರಿ ಇನ್ನಿತರ ಕೆಲಸಗಳಿಗೆ ಹಣದ ಅಡಚಣೆ ಉಂಟಾಯಿತು.
ಸಿದ್ದಾಪುರದ ಅಥರ್ವ ಸೊಸೈಟಿ ಹಾಗೂ ಶಿರಸಿಯ ಶ್ರೀಮಾತಾ ಸೊಸೈಟಿಗೆ ಹೋಗಿ ಅಲ್ಲಿಯೂ ಸಂದೀಪ ಪಲ್ಲೇದ್ ಅವರು ಸಾಲಪಡೆದರು. ಆದರೆ, ವ್ಯಾಪಾರದಲ್ಲಿ ನಿರೀಕ್ಷಿತ ಪ್ರಮಾಣದ ಲಾಭ ಅವರಿಗೆ ಸಿಗಲಿಲ್ಲ. ಕೃಷಿ ಕೆಲಸವೂ ಸರಿಯಾಗಿ ಆಗಲಿಲ್ಲ. ನಷ್ಟಕ್ಕೆ ಹೆದರಿದ ಅವರು ದುಡುಕು ನಿರ್ಧಾರಕ್ಕೆ ಮುಂದಾಗಿದ್ದು, ಫೆ 12ರಂದು ತಮ್ಮ ಹಳೆ ಮನೆಯಲ್ಲಿ ಕಳೆನಾಶಕ ಸೇವಿಸಿದರು.
ಇದನ್ನು ನೋಡಿದ ಕುಟುಂಬದವರು ಸಂದೀಪ ಪಲ್ಲಾಟೆ ಅವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅದಾದ ನಂತರ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಿರಂತರ ಚಿಕಿತ್ಸೆ ನಂತರವೂ ಅವರು ಫೆ 13ರಂದು ಸಾವನಪ್ಪಿದರು. ಈ ವಿಷಯದ ಬಗ್ಗೆ ಮಂಜುಳಾ ಪಲ್ಲೇದ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದರು.