ಹುಬ್ಬಳ್ಳಿಯಿಂದ ಕೈಗಾಗೆ ಜಲ್ಲಿಕಲ್ಲು ಸಾಗಿಸುತ್ತಿದ್ದ ಯಲ್ಲಾಪುರದ ತನಜೀಲ್ ಶೇಖ್ ಅವರಿಗೆ ಕಾರವಾರದಲ್ಲಿ ವ್ಯಕ್ತಿಗಳಿಬ್ಬರು ಸೇರಿ ಥಳಿಸಿದ್ದಾರೆ. ಅವರ ಟಿಪ್ಪರ್’ಗೆ ಕಲ್ಲು ಎಸೆದು ಗಾಜು ಒಡೆದಿದ್ದಾರೆ.
ಯಲ್ಲಾಪುರದ ಉದ್ಯಮ ನಗರದಲ್ಲಿ ತನಜೀಲ್ ಆದಂ ಶೇಖ್ (25) ಅವರು ವಾಸವಾಗಿದ್ದಾರೆ. ಟಿಪ್ಪರ್ ಚಾಲಕರಾಗಿ ಅವರು ದುಡಿದು ಜೀವನ ನಡೆಸುತ್ತಿದ್ದಾರೆ. ಹುಬ್ಬಳ್ಳಿಯ ತಡಸ್’ದಿಂದ ಅವರು ಜಲ್ಲಿ ಕಲ್ಲುಗಳನ್ನು ತುಂಬಿಕೊAಡು ಅಗತ್ಯವಿದ್ದವರಿಗೆ ಪೂರೈಕೆ ಮಾಡುತ್ತಾರೆ. ಹೀಗಿರುವಾಗ, ಕಾರವಾರದ ಕೈಗಾಗೆ ಜಲ್ಲಿ ಕಲ್ಲು ಬೇಕಿರುವ ಬಗ್ಗೆ ಅರಿತು ಅವರು ಆ ಕಡೆ ತಮ್ಮ ಟಿಪ್ಪರ್ ಓಡಿಸಿದ್ದಾರೆ.
ಫೆ 13ರಂದು ಜಲ್ಲಿ ಕಲ್ಲು ತುಂಬಿಕೊoಡು ಕಾರವಾರದ ಕೈಗಾ ಕಡೆ ಹೊರಟ ಅವರಿಗೆ ಫೆ 14ರಂದು ಕೆರವಡಿಯಲ್ಲಿ ಅದೇ ಊರಿನ ರವಿ ದೇವಿದಾಸ ನಾಯ್ಕ ಹಾಗೂ ಕಿರಣ ದೇವಿದಾಸ ನಾಯ್ಕ ಅವರು ಅಡ್ಡಗಟ್ಟಿದ್ದಾರೆ. ಟಿಪ್ಪರ್ ನಿಲ್ಲಿಸುವಂತೆ ಸೂಚಿಸಿದ ಅವರಿಬ್ಬರು ಬೈಗುಳ ಶುರು ಮಾಡಿದ್ದಾರೆ. ಇದರಿಂದ ಬೆದರಿದ ತನಜೀಲ್ ಶೇಖ್ ಅವರು ಟಿಪ್ಪರಿನ ಗ್ಲಾಸು ಏರಿಸಿದ್ದು, ಆಗ ಎದುರಾಳಿಗಳಿಬ್ಬರು ಸೇರಿ ಕಲ್ಲು ತೂರಾಟ ಮಾಡಿದ್ದಾರೆ. ಈ ವೇಳೆ ಟಿಪ್ಪರಿನ ಗ್ಲಾಸು ಒಡೆದಿದೆ. ಅದಾದ ನಂತರ ತನಜೀಲ್ ಶೇಖ್ ಅವರನ್ನು ಹಿಡಿದು ಥಳಿಸಿದ್ದಾರೆ.
`ಮತ್ತೆ ಈ ದಾರಿಯಲ್ಲಿ ಓಡಾಡಿದರೆ ಎಚ್ಚರ’ ಎಂದು ಅವರಿಬ್ಬರು ಬೆದರಿಸಿದ್ದು, ತಮಗಾದ ನೋವಿನ ಬಗ್ಗೆ ತನಜೀಲ್ ಶೇಖ್ ಅವರು ಪೊಲೀಸ್ ದೂರು ನೀಡಿದ್ದಾರೆ. ರವಿ ನಾಯ್ಕ ಹಾಗೂ ಕಿರಣ ನಾಯ್ಕ ಅವರ ವಿರುದ್ಧ ಮಲ್ಲಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.