ಸಿದ್ದಾಪುರ-ಚಂದ್ರಗುತ್ತಿ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ. ಹದಗೆಟ್ಟ ರಸ್ತೆಯೇ ಅಪಘಾತಕ್ಕೆ ಕಾರಣ ಎಂಬ ಅರಿವಿದ್ದರೂ ರಸ್ತೆ ಸರಿಪಡಿಸುವ ಕಾರ್ಯ ನಡೆದಿಲ್ಲ.
ಧಾರ್ಮಿಕ ಕ್ಷೇತ್ರವಾಗಿರುವ ಚಂದ್ರಗುತ್ತಿಗೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಸಿದ್ದಾಪುರ, ಹಳ್ಳಿಬೈಲು, ಐಗೋಡು, ಕಾನಗೋಡು ಮಾರ್ಗವಾಗಿ ಜನ ಓಡಾಡುತ್ತಾರೆ. ಆದರೆ, ಈ ಮಾರ್ಗದ ರಸ್ತೆಗೆ ಕಳೆದ ಐದಾರು ವರ್ಷಗಳಿಂದ ನವೀಕರಣ ಭಾಗ್ಯ ಸಿಕ್ಕಲ್ಲ. ಅಲ್ಲಿಲ್ಲಿ ತೇಪೆ ಹಾಕಲಾಗಿದ್ದರೂ ಅದು ಸರಿಯಾಗಿಲ್ಲ. ಹೀಗಾಗಿ ಎಲ್ಲಡೆ ಹೊಂಡ ತುಂಬಿದ ಗುಂಡಿಗಳಿದ್ದು, ಅನೇಕರು ಆ ಗುಂಡಿಗಳಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ.
ಐಗೋಡಿನ ಮುಖ್ಯ ತಿರುವಿನಲ್ಲಿ ರಸ್ತೆಯು ಕಿತ್ತು ಹೊಗಿದೆ. ಸಣ್ಣ ಜೆಲ್ಲಿಕಲ್ಲುಗಳು ಹರಡಿರುವ ಕಾರಣ ಬೈಕ್ ಸವಾರರು ಅಲ್ಲಿ ಬೀಳುತ್ತಿದ್ದಾರೆ. ಈ ಕುರಿತು ಗ್ರಾಮಸ್ಥರು ಸಾಕಷ್ಟು ಬಾರಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಮಾತ್ರ ಹಾಗೇ ಇದೆ. ಅಲ್ಲದೇ ಟೆಂಡರ್ ಪಡೆಯುವವರೂ ಕೂಡ ಜೆಲ್ಲಿಯ ಮೇಲೆ ಡಾಂಬರ್ ಹಾಕಿ ಹಣ ಎಣಿಸಿಕೊಳ್ಳುತ್ತಿದ್ದು, ವಾಹನ ಸವಾರರು ಇದರಿಂದ ಹೈರಣಾಗಿದ್ದಾರೆ.
ಈ ಎಲ್ಲಾ ಹಿನ್ನಲೆ ಗ್ರಾಮಸ್ಥರು ಇದೀಗ ಒಗ್ಗಟ್ಟಾಗಿದ್ದಾರೆ. ಒಂದು ತಿಂಗಳ ಒಳಗಾಗಿ ರಸ್ತೆ ನವೀಕರಣ ಆಗದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಎರಡು ಜಿಲ್ಲೆಗಳ ಪ್ರಮುಖ ಕೊಂಡಿಯಾಗಿರುವ ರಸ್ತೆಯ ಅಭಿವೃದ್ಧಿಗೆ ಮನಸ್ಸು ಮಾಡಿದ ಜನಪ್ರತಿನಿಧಿಗಳಿಗೂ ಬಿಸಿ ಮುಟ್ಟಿಸುವ ಬಗ್ಗೆ ನಿರ್ಣಯಿಸಿದ್ದಾರೆ.