ಶಿರಸಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು `ಭೀಮಣ್ಣ ಖಂಡ್ರೇ’ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ, ಗೋಕರ್ಣ ಎನ್ನುವ ಬದಲು `ಗೋಕಾಕ್’ ಎಂದು ಹೇಳಿದ್ದಾರೆ. ಅದಾದ ನಂತರ ಸುಧಾರಿಸಿಕೊಂಡು ಸರಿಯಾದ ಪದ ಪ್ರಯೋಗ ಮಾಡಿದ್ದಾರೆ.
ಗಂಗಾವಳಿ ಸೇತುವೆಯ ಉದ್ಘಾಟನಾ ಭಾಷಣದ ಆರಂಭದಲ್ಲಿ ಸಿದ್ದರಾಮಯ್ಯ ಅವರು ಶಾಸಕ ಸತೀಶ್ ಸೈಲು, ದೇಶಪಾಂಡೆ, ಭೀಮಣ್ಣ ಖಂಡ್ರೇ ಎನ್ನುತ್ತ ಮಾತು ಶುರು ಮಾಡಿದರು. ಭಾಷಣದ ನಡುವಿನಲ್ಲಿ ಮತ್ತೆ ಸಿದ್ದರಾಮಯ್ಯ ಅವರು ಎಲ್ಲಾ ಶಾಸಕರ ಹೆಸರು ಉಚ್ಚಾರಿಸಿದ್ದು, ಆ ವೇಳೆಯಲ್ಲಿಯೂ ಭೀಮಣ್ಣ ನಾಯ್ಕ ಅವರ ಹೆಸರು ಉಚ್ಚರಿಸಲು ತಡವರಿಸಿದರು. ಭಾಷಣದಲ್ಲಿ ಎರಡನೇ ಬಾರಿ ಎಲ್ಲರ ಹೆಸರು ಹೇಳುವಾಗ ಭೀಮಣ್ಣನ ನಾಯ್ಕ ಎಂದು ಸಂಬೋಧಿಸಿದ ಸಿದ್ದರಾಮಯ್ಯ ಅವರು ಮತ್ತೊಮ್ಮೆ `ಭೀಮಣ್ಣ ನಾಯ್ಕ’ ಎಂದು ಸರಿಯಾಗಿ ಓದಿ ಹೇಳಿದರು.
ತಮ್ಮ ಭಾಷಣದಲ್ಲಿ ಗೋಕರ್ಣದ ಬದಲು `ಗೋಕಾಕ್’ ಎಂದು ಹೇಳಿದ್ದು, ನಂತರ ಸುಧಾರಿಸಿಕೊಂಡು `ಥೊ ಅಲ್ಲಲ್ಲ, ಎಂಥದು ಅದು ಹೊನ್ನಾವರ’ ಎಂದು ಹೇಳಿದರು. ಆಗ ಜನ ಜೋರಾಗಿ `ಗೋಕರ್ಣ’ ಎಂದು ಕೂಗಿದರು. ಆಗ, ಸಿದ್ದರಾಮಯ್ಯ ಅವರು `ಗೋಕರ್ಣ’ ಎಂಬ ಪದವನ್ನು ಒತ್ತಿ ಹೇಳಿದರು. `ಈ ನಡುವೆ ಅಂಕೋಲಾ-ಕಾರವಾರ ಸೇತುವೆ’ ಎಂದು ಒಮ್ಮೆ ತಪ್ಪಾಗಿ ಹೇಳಿದರು. ನಂತರ ಸುಧಾರಿಸಿಕೊಂಡು `ಅಂಕೋಲಾ-ಕುಮಟಾ ಸೇತುವೆ’ ಎಂದು ಸರಿಯಾಗಿ ಮಾತನಾಡಿದರು.
`ಗಂಗಾವಳಿ ನದಿಗೆ ಸೇತುವೆ ಆಗಬೇಕು ಎಂದು ಹೋರಾಟ ನಡೆದಿತ್ತು. 2017ರಲ್ಲಿ ದೇಶಪಾಂಡೆ ಉಸ್ತುವಾರಿ ಸಚಿವರಾಗಿದ್ದಾಗ ಬಂದು ಶಂಕುಸ್ಥಾಪನೆ ಮಾಡಿದ್ದೆ. ಇದೀಗ ಸೇತುವೆ ಉದ್ಘಾಟಿಸುತ್ತಿರುವುದು ಸಂತಸ ತಂದಿದೆ’ ಎಂದು ಸಿದ್ದರಾಮಯ್ಯ ಅವರು ಹೇಳಿದರು.