ಮನೆಯ ಸದಸ್ಯರೆಲ್ಲರೂ ನಿದ್ರೆಗೆ ಜಾರಿದಾಗ ಉಪಾಯವಾಗಿ ಆ ಮನೆಯೊಳಗೆ ಪ್ರವೇಶಿಸಿ ಕಳ್ಳತನ ಮಾಡಿದ್ದ ಹೊಟೇಲ್ ಸಪ್ಲಾಯರ್’ನನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.
ಕುಮಟಾ ಬಸ್ತಿಪೇಟೆ ಬಳಿಯ ರಾಕೇಶ ಚಂದ್ರಶೇಖರ್ ಗುಡಿಗಾರ ಅವರ ಮನೆಯಲ್ಲಿ ಫೆಬ್ರವರಿ 15ರ ರಾತ್ರಿ ಕಳ್ಳತನ ನಡೆದಿತ್ತು. ಮನೆಯ ಜನರೆಲ್ಲರೂ ನಿದ್ದೆಗೆ ಜಾರಿದ ನಂತರ ಆಗಮಿಸಿದ ಸೊರಬದ ಬಸವರಾಜ ಗೌಡ ಅವರು ಮನೆಯ ಕಿಟಕಿಯ ಶೆಡ್‌ನೆಟ್ ತುಂಡು ಮಾಡಿದ್ದರು. ನಂತರ ಅಲ್ಲಿಂದ ಬಾಗಿಲಿನ ಚಿಲಕ ತೆಗೆದು ಮನೆಯೊಳಗೆ ಪ್ರವೇಶಿಸಿದ್ದರು. ಮನೆಯ ಮೂಲೆ ಮೂಲೆಯನ್ನು ಶೋಧಿಸಿದ ಬಸವರಾಜ ಗೌಡ ಅವರು ಅಲ್ಲಿದ್ದ 80 ಸಾವಿರ ರೂ ಹಣವನ್ನು ದೋಚಿ ಪರಾರಿಯಾಗಿದ್ದರು. ಈ ವೇಳೆ ಮನೆಯಲ್ಲಿ ವೃದ್ಧ ದಂಪತಿ ಮಾತ್ರ ಇದ್ದು, ಕಳ್ಳತನ ನಡೆದಿರುವುದು ಅವರ ಅರಿವಿಗೆ ಬಂದಿರಲಿಲ್ಲ.
ಈ ಬಗ್ಗೆ ರಾಕೇಶ ಗುಡಿಗಾರ ಅವರು ಕುಮಟಾ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು. ಪಿಐ ಯೋಗೇಶ ಕೆ ಎಂ, ಪಿಸೈ ಮಯೂರ ಪಟ್ಟಣಶೆಟ್ಟಿ, ಸಿಬ್ಬಂದಿ ಗಣೇಶ ನಾಯ್ಕ, ದಯಾನಂದ ನಾಯ್ಕ, ಕಿರಣ ನಾಯ್ಕ, ಪ್ರದೀಪ ನಾಯಕ ಸೇರಿ ಕಳ್ಳನ ಶೋಧ ಶುರು ಮಾಡಿದರು. ಸೊರಬ ಚಂದ್ರಗುತ್ತಿ ಹೊಬಳಿಯ ಬಸವರಾಜ ಶಿವಪ್ಪ ಗೌಡ ಅವರು 10 ತಾಸಿನ ಒಳಗೆ ಸಿಕ್ಕಿಬಿದ್ದರು.
`ಕಳ್ಳತನ ತಡೆಗೆ ಸಿಸಿ ಕ್ಯಾಮರಾ ಸಹಕಾರಿ’