ಕಾರವಾರ ನಗರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧೀನದಲ್ಲಿರುವ ಸರಕಾರಿ ಬಾಲಕಿ ಬಾಲಮಂದಿರದಲ್ಲಿ ಶನಿವಾರ ಮಧ್ಯಾಹ್ನ ಬಾಲಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಲ್ಲಿನ ಅಧಿಕಾರಿ-ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಬಾಲಕಿಯನ್ನು ರಕ್ಷಿಸಲಾಗಿದ್ದು, ಸದ್ಯ ಬಾಲಕಿಗೆ ಚಿಕಿತ್ಸೆ ಮುಂದುವರೆದಿದೆ.
ವ್ಯಕ್ತಿಯೊಬ್ಬರಿAದ ದೌರ್ಜನ್ಯಕ್ಕೆ ಒಳಗಾಗಿದ್ದ ಬಾಲಕಿ ಅಗಸ್ಟ್ ತಿಂಗಳಿನಲ್ಲಿ ಸಂತ್ರಸ್ತೆಯಾಗಿ ಬಾಲ ಮಂದಿರ ಸೇರಿದ್ದರು. ನಗರದ ಸರಕಾರಿ ಪ್ರೌಢಶಾಲೆಯೊಂದರಲ್ಲಿ ಅವರು ಓದುತ್ತಿದ್ದರು. ಎರಡು ವಾರದಿಂದ ಶಾಲೆಗೆ ಹಾಜರಾಗಿರಲಿಲ್ಲ. ಮಾನಸಿಕವಾಗಿ ಕುಗ್ಗಿದ್ದ ಬಾಲಕಿಯ ಆಪ್ತ ಸಮಾಲೋಚನೆ ನಡೆದಿತ್ತು. ಅದಾಗಿಯೂ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಾಲಕಿ ಹೇಳಿಕೊಂಡಿದ್ದು, ಸಿಬ್ಬಂದಿ ತೀವೃ ನಿಗಾವಿರಿಸಿದ್ದರು.
ಆ ಬಾಲಕಿಯನ್ನು ಈಚೆಗೆ ಧಾರವಾಡದ ನಿಮಾನ್ಸ್ ಸಂಸ್ಥೆಗೆ ಕರೆದೊಯ್ದು ಚಿಕಿತ್ಸೆಯನ್ನು ಸಹ ಕೊಡಿಸಲಾಗಿತ್ತು. ಚಿಕಿತ್ಸೆ ಬಳಿಕವೂ ಆತ್ಮಹತ್ಯೆ ಮಾಡುವುದಾಗಿ ಪದೇಪದೇ ಹೇಳಿಕೊಳ್ಳುತ್ತಿದ್ದು, ಶನಿವಾರ ಮಧ್ಯಾಹ್ನ ದುಡುಕು ನಿರ್ಧಾರಕ್ಕೆ ಮುಂದಾದರು. ನೇಣು ಹಾಕಿಕೊಳ್ಳುವುದನ್ನು ನೋಡಿದ ಸಿಬ್ಬಂದಿ ತಕ್ಷಣ ಧಾವಿಸಿ ಬಾಲಕಿಯ ರಕ್ಷಣೆ ಮಾಡಿದರು. ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿದರು.
ಸದ್ಯ ಬಾಲಕಿಗೆ ಚಿಕಿತ್ಸೆ ಮುಂದುವರೆದಿದೆ. ಮಾನಸಿಕ ಆರೋಗ್ಯ ಆರೈಕೆ ಬಗ್ಗೆ ಮುತುವರ್ಜಿವಹಿಸಲಾಗಿದೆ.