ಕಾರವಾರದ ಶೇಜವಾಡ ಬಳಿಯ ದೇವಾಲಯಕ್ಕೆ ಕಳ್ಳರು ನುಗ್ಗಿದ್ದಾರೆ. ಕೆಳಗಿನ ಮುಖೇರಿ ದೇಗುಲಕ್ಕೆ ನುಗ್ಗಿದ ನೀಚರು ದೇವಿ ಕೊರಳಿನಲ್ಲಿದ್ದ ಆಭರಣ ಕದ್ದು ಪರಾರಿಯಾಗಿದ್ದಾರೆ.
ಕಾರವಾರದ ಕೆಳಗಿನ ಮುಖೇರಿಯಲ್ಲಿ ನವದುರ್ಗಾ ಗಿಂಡಿ ದೇವಾಲಯವಿದೆ. ಊರಿನವರ ಜೊತೆ ಬೇರೆ ಬೇರೆ ಭಾಗದ ಜನರು ಈ ದೇವಿಗೆ ನಿಷ್ಠೆಯಿಂದ ನಡೆದುಕೊಳ್ಳುತ್ತಾರೆ. ಜನ ಶ್ರದ್ಧಾ-ಭಕ್ತಿಯಿಂದ ಇಲ್ಲಿ ಪೂಜೆ ಸಲ್ಲಿಸುತ್ತಿದ್ದು, ನಂಬಿದ ಎಲ್ಲರಿಗೂ ದೇವಿ ಒಳಿತು ಮಾಡುತ್ತದೆ ಎಂಬ ಮಾತಿದೆ. ಹೀಗಿರುವಾಗ ಫೆಬ್ರವರಿ 24ರ ರಾತ್ರಿ ಈ ದೇಗುಲದಲ್ಲಿ ಕಳ್ಳತನ ನಡೆದಿದೆ. ಜನ ಭಕ್ತಿಯಿಂದ ಪೂಜಿಸುವ ದೇವಿಯ ಕೊರಳಿನಲ್ಲಿದ್ದ ಮಾಂಗಲ್ಯವನ್ನೇ ಕಳ್ಳರು ದೋಚಿದ್ದಾರೆ.
ಫೆ 24ರ ಸಂಜೆ ದೇವಾಲಯಕ್ಕೆ ಬಾಗಿಲು ಹಾಕಲಾಗಿತ್ತು. ಆ ದಿನ ರಾತ್ರಿ ಮುಂದಿನ ಬಾಗಿಲಿನ ಚಿಲಕ ಒಡೆದ ಕಳ್ಳರು ಒಳಗೆ ಪ್ರವೇಶಿಸಿದ್ದು, ಗರ್ಭಗುಡಿಯ ಬಾಗಿಲನ್ನು ಸಹ ಒಡೆದಿದ್ದಾರೆ. ಅದಾದ ನಂತರ ದೇವಿ ಕೊರಳಿನಲ್ಲಿದ್ದ 10 ಗ್ರಾಂ ತೂಕದ ಬೆಳ್ಳಿ ಸರ ಕದ್ದಿದ್ದಾರೆ. 1 ಗ್ರಾಂ ಬಂಗಾರದ ಲಾಕೇಟ್ ಜೊತೆಯಿದ್ದ ಎರಡು ಬೆಳ್ಳಿ ಕರಿಮಣಿ ಸರವನ್ನು ಸಹ ದೋಚಿದ್ದಾರೆ. ಮರುದಿನ ದೇವಾಲಯಕ್ಕೆ ಬಂದ ಭಕ್ತರಿಗೆ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಅಲ್ಲಿನ ಮಹೇಂದ್ರ ಕುಶಾಲ್ ಬಾಂದೇಕರ್ ಅವರು ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿದ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಕಳ್ಳರ ಶೋಧ ಶುರು ಮಾಡಿದ್ದಾರೆ.