ಅಂಕೋಲಾದ ಲಕ್ಷಿಶ್ವರ ದೈವಜ್ಞ ಭವನದ ಬಳಿ ಗುಡುಗುಡಿ ಆಟ ನಡೆದಿದ್ದು, ಪೊಲೀಸರನ್ನು ಕಂಡ ನಾಲ್ವರು ಓಡಿ ಪರಾರಿಯಾಗಿದ್ದಾರೆ. ಆಟ ಆಡಿಸುತ್ತಿದ್ದ ಇಬ್ಬರು ಸಿಕ್ಕಿ ಬಿದ್ದಿದ್ದಾರೆ.
ಜನವರಿ 31ರಂದು ಕುಮಟಾ ಹಿರೇಗುತ್ತಿ ಎಣ್ಣೆಮುಡಿಯ ಶಂಕರ್ ಸತ್ಯನಾರಾಯಣ ನಾಯ್ಕ, ಅಂಕೋಲಾ ಬೊಬ್ರುವಾಡದ ನವೀನ ರತ್ನಾಕರ ನಾಯ್ಕ ಸೇರಿ ಇಲ್ಲಿ ಗುಡುಗುಡಿ ಆಟ ಆಯೋಜಿಸಿದ್ದರು. `ಚಂದ್ರನಿಗೆ 50ರೂಪಾಯಿ, ಸೂರ್ಯನಿಗೆ 500ರೂಪಾಯಿ’ ಎನ್ನುತ್ತ ಅವರು ಆಟ ಶುರು ಮಾಡಿದ್ದರು. ಕುಮಟಾ ಸಾಣೆಕಟ್ಟಾ ಬಳಿಯ ಹೊಸ್ಕಟ್ಟಾದ ಈಶ್ವರ ಹರಿಕಂತ್ರ, ಅಂಕೋಲಾ ಕನಸಿನಗದ್ದೆಯ ದೀಪಕ ನಾಯ್ಕ, ಹಾರವಾಡದ ಸಂದೀಪ ನಾಯ್ಕ ಹಾಗೂ ಪೂಜಗೇರಿಯ ಸತೀಶ ಗಾಂವಕರ್ (ಪುಟ್ಟು) ಸಹ ಈ ಆಟದ ಪಾಲುದಾರರಾಗಿದ್ದರು. ಕಾನೂನುಬಾಹಿರ ಕ್ರೀಡೆ ನಡೆದ ಬಗ್ಗೆ ಪೊಲೀಸರಿಗೆ ಫೋನ್ ಬಂದಿತು.
ನಸುಕಿನ 1 ಗಂಟೆ ಸುಮಾರಿಗೆ ಪಿಸೈ ಸುನಿಲ ಹುಲ್ಲೋಳ್ಳಿ ಅಲ್ಲಿ ದಾಳಿ ಮಾಡಿದರು. ಪೊಲೀಸರನ್ನು ನೋಡಿದ ಈಶ್ವರ ಹರಿಕಂತ್ರ, ದೀಪಕ ನಾಯ್ಕ, ಸಂದೀಪ ನಾಯ್ಕ ಹಾಗೂ ಸತೀಶ ಗಾಂವಕರ್ ಅಲ್ಲಿಂದ ಓಡಿ ಪರಾರಿಯಾದರು. ಆದರೆ, ಶಂಕರ್ ನಾಯ್ಕ ಹಾಗೂ ನವೀನ ನಾಯ್ಕ ಅವರ ಬಳಿ ಓಡಲು ಆಗಲಿಲ್ಲ. ಅವರಿಬ್ಬರು ಪೊಲೀಸರಿಗೆ ಶರಣಾಗಿದ್ದು, ಪೊಲೀಸರು ಅವರ ಬಳಿಯಿದ್ದ 2 ಮೊಬೈಲನ್ನು ಜಪ್ತು ಮಾಡಿದರು. ಜೊತೆಗೆ ಜೂಜಾಟಕ್ಕೆ ಬಳಸಿದ್ದ 2360ರೂ ಹಣವನ್ನು ವಶಕ್ಕೆಪಡೆದರು. ಓಡಿ ಹೋದವರನ್ನು ಸೇರಿಸಿ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿದರು.