ನಕಲಿ ದಾಖಲೆಗಳ ಆಧಾರದಲ್ಲಿ ಲಕ್ಷಾಂತರ ರೂ ಮೌಲ್ಯದ ಸರಾಯಿ ಸಾಗಿಸುತ್ತಿದ್ದ ಎರಡು ಟ್ಯಾಂಕರ್ ಜೊಯಿಡಾದ ರಾಮನಗರದ ಬಳಿ ಸಿಕ್ಕಿ ಬಿದ್ದಿದೆ. ಸ್ಪಿರಿಟ್ ಹಾಗೂ ಎಥನಲ್ ಸಾಗಿಸುವುದಕ್ಕಾಗಿ ಅನುಮತಿಪಡೆದು ಆ ಟ್ಯಾಂಕರಿನಲ್ಲಿ ಸರಾಯಿ ಸಾಗಿಸುತ್ತಿರುವವರು ಅಬಕಾರಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.
ದಾವಣೆಗೆರೆ ಶುಗರ್ ಕಂಪನಿ ಲಿಮಿಟೆಡ್ ಕಡೆಯಿಂದ ಗೋವಾ ರಾಜ್ಯದ ಗ್ಲೋಬಲ್ ಕಮ್ ಕಾರ್ಪ್ ಕುಂಡೇಮ್’ಗೆ ಸ್ಪಿರಿಟ್ ಸಾಗಿಸುವುದಕ್ಕಾಗಿ ಸರ್ಕಾರದಿಂದ ಅನುಮತಿಪಡೆಯಲಾಗಿತ್ತು. ಅದರೊಂದಿಗೆ ದಾವಣಗೆರೆಯ ಕೊಲೆಹಳ್ಳಿ ಹಡದಿಯಲ್ಲಿರುವ ಶ್ರೀ ಸಾಯಿ ಟ್ರೇಡರ್ಸ್ & ಕಂಪನಿಯಿAದ ಗೋವಾದ ವರ್ಧನ್ ಸಷ್ಟಿಮೆಂಟ್ಸ್ ಇಂಡಿಯಾ ಪ್ರೈ.ಲಿ. ಪಿಲರ್ನ ಇಂಡಸ್ಟ್ರೀಯಲ್’ಗೆ ಎಥನಲ್ ಸಾಗಾಟಕ್ಕೆ ಸರ್ಕಾರ ಪರವಾನಿಗೆ ನೀಡಿತ್ತು. ಆ ಅನುಮತಿ ದುರುಪಯೋಗಪಡಿಸಿಕೊಂಡ ದುರುಳರು ಟ್ಯಾಂಕರ್ ತುಂಬ ಮದ್ಯಸಾರಾ ಸಾಗಾಟ ಮಾಡುತ್ತಿದ್ದರು.
ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಅಮಾನುಲ್ಲಾ ಖಾನ್ ಎ ಅವರು ಫೆ 21ರಂದು ಆ ಟ್ಯಾಂಕರ್ ತಪಾಸಣೆ ನಡೆಸಿದರು. ಸ್ಥಳಕ್ಕೆ ತಜ್ಞರನ್ನು ಕರೆಯಿಸಿ ಆಲ್ಕೋ ಮೀಟರ್ ಉಪಕರಣದ ಮೂಲಕ ಪರೀಕ್ಷೆ ಮಾಡಿಸಿದಾಗ ಅಪಾರ ಪ್ರಮಾಣದಲ್ಲಿ ಮದ್ಯಸಾರಾ ಸಾಗಾಟ ನಡೆದಿರುವುದು ಗಮನಕ್ಕೆ ಬಂದಿತು. ಈ ಹಿನ್ನಲೆ ಎರಡು ಟ್ಯಾಂಕರನ್ನು ಅಧಿಕಾರಿಗಳು ವಶಕ್ಕೆಪಡೆದರು. ಅದರಲ್ಲಿದ್ದ 50 ಸಾವಿರ ಲೀಟರ್ ಮದ್ಯಸಾರವನ್ನು ಜಪ್ತು ಮಾಡಿದರು. ಮಧ್ಯಪ್ರದೇಶ ಟ್ಯಾಂಕರ್ ಚಾಲಕ ಮಗ್ನರ್ ಸಿಂಗ್ ಹಾಗೂ ಗದಗದ ಧರ್ಮಪ್ಪ ಕಳಕಪ್ಪ ಕಟ್ಟಿಮನಿ ಅವರನ್ನು ಬಂಧಿಸಿ ಜೈಲಿಗೆ ಹಾಕಿದರು. ಈ ಕಾರ್ಯಾಚರಣೆಯಲ್ಲಿ ಟ್ಯಾಂಕರ್ ಸೇರಿ 90 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ಜಪ್ತು ಮಾಡಿದ್ದಾರೆ.