ಕುಮಟಾ ಹೊಲನಗದ್ದೆಯ ಅನಿತಾ ಡಿಸೋಜಾ ಅವರ ಅರ್ಜಿ ಪ್ರಕಾರ ಕುಡಿಯುವ ನೀರು ಪೂರೈಕೆಗೆ ಕ್ರಮ ಜರುಗಿಸಲಾಗಿದೆ’ ಎಂದು ಹೊಲನಗದ್ದೆ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಡಿ ಪ್ರಜ್ಞಾ ಅವರು ದಾಖಲೆಗಳನ್ನು ಒದಗಿಸಿದ್ದಾರೆ.
`ಮಾಜಿ ಅಧ್ಯಕ್ಷೆಯ ಪೋನ್ ನಂ ಬ್ಲಾಕ್ ಮಾಡಿದ ಪಿಡಿಓ: ದೂರು’ ಎಂಬ ತಲೆಬರಹದ ಅಡಿ ಮೊಬೈಲ್ ಮಿಡಿಯಾ ನೆಟ್‌ವರ್ಕ ಗುರುವಾರ ವರದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಷ್ಠನೆ ನೀಡಿದ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಡಿ ಪ್ರಜ್ಞಾ ಅವರು ತಮ್ಮ ವಿರುದ್ಧ ಕೇಳಿ ಬಂದ ಆರೋಪವನ್ನು ಅಲ್ಲಗಳೆದಿದ್ದಾರೆ. `ಅನಿತಾ ಡಿಸೋಜಾ ಅವರ ಪೋನ್ ನಂ ಬ್ಲಾಕ್ ಮಾಡಿಲ್ಲ. ಅವರು ಪೋನ್ ಮಾಡಿದಾಗ ನೆಟ್ ವರ್ಕ ಸಮಸ್ಯೆಯಿಂದ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ’ ಎಂದು ಕುಮಟಾ ಹೊಲನಗದ್ದೆ ಗ್ರಾ ಪಂ ಪಿಡಿಓ ಪ್ರಜ್ಞಾ ನಾಯ್ಕ ಅವರು ಹೇಳಿದ್ದಾರೆ.
`ಅನಿತಾ ಡಿಸೋಜಾ ಅವರ ಅರ್ಜಿ ಪರಿಶೀಲಿಸಲಾಗಿದೆ. ಗ್ರಾಮ ಪಂಚಾಯತ ಅಧಿಕಾರಿಗಳು ಸ್ಥಳ ಭೇಟಿ ಮಾಡಿದ್ದಾರೆ. ಜಲ ಜೀವನ ಯೋಜನೆ ಅಡಿ ಕುಡಿಯುವ ನೀರು ಪೂರೈಸುವಂತೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯವರಿಗೆ ಪತ್ರವನ್ನು ಬರೆಯಲಾಗಿದೆ. ಅವರ ಫೋನ್ ಮಾಡಿದಾಗ ಸಹ ಇದೇ ವಿಷಯ ತಿಳಿಸಲಾಗಿದ್ದು, ಅಪೂರ್ಣ ಮಾಹಿತಿಯಿಂದ ಅವರು ದೂರು ನೀಡಿದ್ದಾರೆ’ ಎಂದವರು ವಿವರಿಸಿದ್ದಾರೆ.
`ಹೊಲನಗದ್ದೆ ಗ್ರಾಮ ಪಂಚಾಯತದಲ್ಲಿ ಸಾರ್ವಜನಿಕ ಕೆಲಸಗಳನ್ನು ಆದ್ಯತೆಯ ಮೇರೆಗೆ ಮಾಡಲಾಗುತ್ತಿದೆ. ಯಾರಿಗೂ ಇಲ್ಲಿ ಅನಗತ್ಯವಾಗಿ ಕಾಡಿಸುವುದಿಲ್ಲ. ನಮ್ಮ ಇತಿಮಿತಿಯಲ್ಲಿ ಆಗುವ ಎಲ್ಲಾ ಕೆಲಸವನ್ನು ಮಾಡಲು ಬದ್ಧವಾಗಿದ್ದೇವೆ. ಅನಿತಾ ಡಿಸೋಜಾ ಅವರಿಗೆ ಕುಡಿಯುವ ನೀರು ಪೂರೈಸಿ ನ್ಯಾಯ ಒದಗಿಸಲು ಗ್ರಾಮ ಪಂಚಾಯತವೂ ಕ್ರಮ ಜರುಗಿಸಿದ್ದು, ಅದರ ಭಾಗವಾಗಿ ಸ್ಥಳ ಪರಿಶೀಲನೆ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಗೆ ಪತ್ರ ರವಾನೆ ಮಾಡಲಾಗಿದೆ’ ಎಂದು ಸ್ಪಷ್ಠಪಡಿಸಿದ್ದಾರೆ. ಜೊತೆಗೆ ಅನಿತಾ ಡಿಸೋಜಾ ಅವರು ಭಟ್ಕಳದ ಬೈಲೂರು ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದು, ಹೊಲನಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷರಾಗಿರಲಿಲ್ಲ ಎಂಬ ಅಂಶವೂ ಗಮನಕ್ಕೆ ಬಂದಿದೆ.